Saturday, November 1, 2014

ಕರುಣಾ ಸಂಧಿ - ೨೪ ನೇ ಪದ್ಯ

 
ತಂದೆ ತಾಯ್ಗಳು ತಮ್ಮ ಶಿಶುವಿಗೆ
ಬಂದ ಭಯಗಳ ಪರಿಹರಿಸಿ ನಿಜ-
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ |
ಹಿಂದೆ ಮುಂದೆಡಬಲದಿ ಒಳ ಹೊರ-
ಗಿಂದಿರೇಶನು ತನ್ನವರನೆಂ-
ದೆಂದು ಸಲಹುವನಾಗಸದವೋಲೆತ್ತ ನೋಡಿದರು  || ೨೪ ||

ಪ್ರತಿಪದಾರ್ಥ : ತಂದೆತಾಯ್ಗಳು - ನಮ್ಮನ್ನು ಹೆತ್ತ ಅಪ್ಪ ಅಮ್ಮ, ತಮ್ಮ ಶಿಶುವಿಗೆ - ತಾವು ಹೆತ್ತ ತಮ್ಮ ಮಗುವಿಗೆ, ಬಂದ ಭಯಗಳ - ಮಗುವಿಗೆ ಬರುವ ಎಲ್ಲಾ ತರಹದ ಭಯಗಳನ್ನೂ, ಪರಿಹರಿಸಿ - ನಿವಾರಿಸಿ, ನಿಜಮಂದಿರದಿ - ತಮ್ಮ ಮನೆಯಲ್ಲಿ, ಬೇಡಿದುದನಿತ್ತು - ಮಗುವು ಬಯಸಿದ್ದನ್ನು ಕೊಟ್ಟು, ಆದರಿಸುವಂದದಲಿ - ಸಂತೈಸುತ್ತಾ ಮುದ್ದಿಸುವಂತೆ, ಹಿಂದೆ ಮುಂದೆ ಎಡ ಬಲದಿ ಒಳ ಹೊರಗೆ - ಸರ್ವಾಂತರ್ಯಾಮಿಯೂ ಸರ್ವ ವ್ಯಾಪ್ತನೂ ಆದ ಭಗವಂತನು ನಮ್ಮ ಸುತ್ತಲೂ ಎಲ್ಲೆಡೆಯಲ್ಲಿಯೂ, ಇಂದಿರೇಶನು - ಇಂದಿರೆಯ ಪತಿಯಾದ ಶ್ರೀಹರಿಯು,  ತನ್ನವರನು - ತನ್ನ ನಿಜ ಭಕ್ತರನ್ನು, ಎಂದೆಂದು - ಸರ್ವಕಾಲವೂ, ಸಲಹುವನು - ಸಂರಕ್ಷಿಸುವನು, ಆಗಸದವೋಲ್ - ಆಕಾಶದಂತೆ ವ್ಯಾಪಿಸಿರುವನು, ಎತ್ತ ನೋಡಿದರು - ಎತ್ತಣಿಂದೆತ್ತ ನೋಡಿದರೂ.


ಹೆತ್ತವರು ತಮ್ಮ ಮಕ್ಕಳು ಹೊರಗೆ ಆಡುವ ಸಮಯದಲ್ಲಿ, ದುಷ್ಟಗ್ರಹ ಸೋಕಿ ಅ೦ಜಿದರೆ, ಮನೆಗೆ ಕರೆತ೦ದು, ಭಯ ಪರಿಹಾರಾರ್ಥವಾಗಿ ಮ೦ತ್ರ ತ೦ತ್ರಗಳಿ೦ದ ಉಪಚರಿಸಿ, ಸ್ವಗೃಹವನ್ನು ಬಿಟ್ಟುಹೋಗದೆ ಇರತಕ್ಕ ಮಾರ್ಗವನ್ನು ಹೇಗೆ ಕಲ್ಪಿಸುತ್ತಾರೋ ಹಾಗೆಯೆ ಪರಮಾತ್ಮನು ತನ್ನ ಭಕ್ತರನ್ನು ಸರ್ವಕಾಲದಲ್ಲಿಯೂ, ಸರ್ವ ದೇಶದಲ್ಲಿಯೂ ಸ೦ರಕ್ಷಣೆ ಮಾಡುವನು. ಭಕ್ತರು ಆಟವಾಡುವ ಸ್ಥಳ ಎ೦ದರೆ, ಅಸೃಜ್ಯ ರಾಶಿಯಿ೦ದ ಸೃಷ್ಟಿಗೆ ಬರುವ ಪ್ರದೇಶವಾದ ಆಟದ ಬಯಲು ಆಗಿರುತ್ತದೆ. ದುಷ್ಟ ಸಹವಾಸ ಎ೦ದರೆ ಅದು ಈ ಲಿ೦ಗದೇಹವಾಗಿರುತ್ತದೆ. ದುಷ್ಟಗ್ರಹಗಳು ಎ೦ದರೆ ಅಹ೦ಮಮತಾದಿಗಳಾಗಿರುತ್ತವೆ. ಭಯವು ಎ೦ದರೆ ಅಹ೦ಮಮತಾದಿಗಳಿ೦ದ ಜನ್ಯವಾಗುವ ಪಾಪಕರ್ಮಗಳಿ೦ದ ಭಯ ಪಡುವುದು ಎ೦ದಾಗುತ್ತದೆ. ಮ೦ತ್ರ ತ೦ತ್ರಗಳು ಎ೦ದರೆ ಜ್ಜಾನ, ಭಕ್ತಿ ವೈರಾಗ್ಯವನ್ನು ಹುಟ್ಟಿಸುವುದು ಎ೦ದು ಅರ್ಥೈಸಿಕೊಳ್ಳಬೇಕು. ಇನ್ನು ನಿಜ ಮ೦ದಿರ ಎ೦ದರೆ ಅದು ವೈಕು೦ಠ ಲೋಕವಾಗಿರುತ್ತದೆ.

ಈ ಪ್ರಕಾರ ಅಸೃಜ್ಯರಾಶಿಯಿ೦ದ ಸೃಷ್ಟಿಗೆ ಬ೦ದ ಕೂಡಲೇ ಅಹ೦ಮಮತಾದಿಗಳು ಸೋಕಿ, ಅವುಗಳಿ೦ದ ಜನ್ಯವಾಗುವ ಪಾಪಕರ್ಮಗಳನ್ನು ಮಾಡಿ, ಭಯಪಡುವ ಜೀವರಾಶಿಗೆ ಜ್ಜಾನ, ಭಕ್ತಿ ವೈರಾಗ್ಯ ಎ೦ಬ ಮ೦ತ್ರಗಳನ್ನು ಅವರ ದೇಹದಲ್ಲಿ ಪ್ರವೇಶ ಮಾಡಿಸಿ, ಆ ಭಯವನ್ನು ಓಡಿಸಿ ಬಹಿರ್ ಸ೦ಚಾರಕ್ಕೆ ಕಾರಣವಾದ ಲಿ೦ಗದೇಹವನ್ನು ದುಷ್ಟ ಸ್ನೇಹದಿ೦ದ ಬೇಪ೯ಡಿಸಿ, ನಿಜಮ೦ದಿರವಾದ ವೈಕು೦ಠ ಲೋಕಕ್ಕೆ ಕರೆದುಕೊ೦ಡು ಹೋಗಿ, ಸ್ವರೂಪ ಯೋಗ್ಯತಾನುಸಾರ ಬೇಡಿದ್ದಕ್ಕೆ ಭ೦ಗ ಬಾರದ೦ತೆ ಫಲಾನುಭಾವ ಕೊಟ್ಟು ಸ೦ರಕ್ಷಣೆ ಮಾಡುತ್ತಾನೆ.

ತಂದೆ ತಾಯ್ಗಳು  - ತಂದೆ ತಾಯಿಗಳು ತಮ್ಮ ಕಾಳಜಿಯನ್ನು ಮಾಡದೆ, ಸದಾ ತಮ್ಮ ಮಕ್ಕಳ ಕ್ಷೇಮವನ್ನು ಬಯಸುತ್ತಾರೆ.  ಪ್ರೀತಿಯಿಂದ ಸಕಲ ಸೌಲಭ್ಯಗಳನ್ನೂ ಕೊಟ್ಟು ಸದಾ ಬೆಂಗಾವಲಿರುತ್ತಾರೆ.  ಯಾವ ಆಪತ್ತುಗಳೂ ಬಾರದಂತೆ ಜಾಗೃತವಾಗಿ ನೋಡಿಕೊಳ್ಳುತ್ತಾರೆ, ಮಕ್ಕಳು ಕೇಳಿದ್ದನ್ನೆಲ್ಲಾ ಕೊಟ್ಟು ಆದರಿಸುತ್ತಾರೆ.  ಹಾಗೆಯೇ ಭಗವಂತನೂ ಕೂಡ, ಎತ್ತಲಿಂದೆತ್ತ ನೋಡಿದರೂ ಕಾಣುವ ಆಕಾಶದಂತೆ, ನಮ್ಮೊಳಗೂ ಹೊರಗೂ ಎತ್ತೆತ್ತಲೂ ಇದ್ದು ನಮ್ಮನ್ನು ಸದಾ ರಕ್ಷಿಸುತ್ತಾನೆ.

ದಾಸರಾಯರು ಹರಿಕಥಾಮೃತಸಾರ ಕೃತಿಯಲ್ಲಿ ಭಗವಂತನ ಕಾರುಣ್ಯವನ್ನೂ ಮತ್ತು ಅವನು ನಮ್ಮನ್ನು ರಕ್ಷಿಸುವ ಪರಿಯನ್ನೂ ಅತಿಶಯವಾಗಿ, ದೃಷ್ಟಾಂತಗಳೊಂದಿಗೆ ವಿವರಿಸುತ್ತಾರೆ.  ಭಾಗವತ ಸಪ್ತಮ ಸ್ಕಂದ ನವಮೋಧ್ಯಾಯದಲ್ಲಿ ಪ್ರಹ್ಲಾದನು  "ಬಾಲಸ್ಯ ನೇಹ ಶರಣಂ ಪಿತರೌ ನೃಸಿಂಹ | ನಾರ್ತಸ್ಯ ಚಾಗದಮುದನ್ವತಿ ಮಜ್ಜತೋ ನೌಃ" -  ನೀನು ಉಪೇಕ್ಷೆ ಮಾಡಿದರೆ ತಂದೆ ತಾಯಿಗಳೂ ಕೂಡ ತಮ್ಮ ಬಾಲಕನನ್ನು ರಕ್ಷಿಸಲಾರರು.  ರಕ್ಷಣೆಗಾಗಿ ಮಾಡಿದ ಯಾವುದೇ ಉಪಾಯವೂ ಫಲಿಸುವುದೇ ಇಲ್ಲವೆಂದು ಸ್ತುತಿಸುತ್ತಾನೆ.  ಏನೂ ತಿಳಿಯದ, ಯಾವುದನ್ನೂ ತಾನೇ ಮಾಡಿಕೊಳ್ಳಲಾಗದ ಸ್ಥಿತಿಯಲ್ಲಿರುವ ಪುಟ್ಟ ಕಂದನ ಬೇಕು ಬೇಡಗಳನ್ನೆಲ್ಲಾ ತಂದೆ ತಾಯಿಗಳು ಹೇಗೆ ತಾವೇ ತಿಳಿದುಕೊಂಡು ಮಗುವನ್ನು ಓಲೈಸಿ ಲಾಲಿಸುತ್ತಾರೋ, ಹಾಗೇ ಭಗವಂತ ತನ್ನನ್ನು ನಂಬಿ ಬಂದ ಭಕ್ತರನ್ನು ಅವರ ಅವಶ್ಯಕತೆಗಳನ್ನೆಲ್ಲಾ ಪೂರೈಸಿ, ಅವರನ್ನು ಓಲೈಸುತ್ತಾನೆ, ಲಾಲಿಸುತ್ತಾನೆ ಮತ್ತು ಸಂರಕ್ಷಿಸುತ್ತಾನೆ.  ಮಗುವಿಗಿಂತಲೂ ಕಡೆಯಾಗಿ, ಏನೂ ತಿಳಿಯದೆ ಅಜ್ಞಾನದಲ್ಲಿ ಮುಳುಗಿರುವ ಜೀವಿಗಳನ್ನು ಎಚ್ಚರಿಸುತ್ತಾನೆ, ಜ್ಞಾನ ನೀಡುತ್ತಾನೆ ಮತ್ತು ಮೋಕ್ಷವನ್ನೂ ಕೊಡುತ್ತಾನೆ.  ಮೋಕ್ಷವಷ್ಟೇ ಸಾಲದೆಂದು ಮೋಕ್ಷದಲ್ಲಿ ಆನಂದವನ್ನೂ ಕರುಣಿಸುತ್ತಾನೆ.

ಜೀವಿಯ ಪ್ರಾಕೃತಿಕ ಶರೀರಕ್ಕೆ ತಂದೆ-ತಾಯಿಯಾದವರು ದೇಹದ ಜನನಕ್ಕೆ ಕಾರಣರಾಗುತ್ತಾರೆ ಮತ್ತು ಈ ಜನ್ಮದ ದೇಹಕ್ಕೆ ಮಾತ್ರ ತಂದೆ-ತಾಯಿಗಳಾಗುತ್ತಾರೆ.  ಹಿಂದಿನ ಜನ್ಮಗಳಲ್ಲಿ ಅವರು ಇರಲಿಲ್ಲ, ಮುಂದಿನ ಜನ್ಮಗಳಲ್ಲಿ ಇರುವುದಿಲ್ಲ.  ಆದರೆ ಜೀವಿಯನ್ನು ಸದಾ ಕಾಲವೂ, ಯಾವುದೇ ದೇಹದಲ್ಲಿದ್ದರೂ ಕಾಪಾಡುವವನು ಮತ್ತು ಎಲ್ಲರಿಗೂ, ಇಡೀ ಬ್ರಹ್ಮಾಂಡಕ್ಕೇ ಭಗವಂತನು ತಂದೆ-ತಾಯಿಯಾದವನು.  ಪುಟ್ಟ ಮಕ್ಕಳು ಆಡಲು ಬಿಟ್ಟರೆ, ತಮ್ಮಷ್ಟಕ್ಕೇ ಆಟವಾಡಿಕೊಳ್ಳುತ್ತಾ ತಂದೆ-ತಾಯಿಗಳನ್ನು ಮರೆತು ಆಟದಲ್ಲಿ ಲೀನವಾಗಿರುತ್ತಾರೆ.  ಆದರೆ ಯಾವುದೋ ಹುಳವನ್ನೋ, ಇನ್ನೇನನ್ನೋ ನೋಡಿ ಬೆಚ್ಚಿ, ಬೆದರಿದಾಗ ಚೀರುತ್ತಾ ತಂದೆ-ತಾಯಿಯರನ್ನು ಹುಡುಕುತ್ತಾರೆ.   ಕಂಗಾಲಾದ ಕಂದನನ್ನು ಕಂಡು ತಂದೆ-ತಾಯಿಗಳು ಧಾವಿಸಿ ಬಂದು ಎತ್ತಿಕೊಂಡು, ಅಪ್ಪಿಕೊಂಡು ಸಮಾಧಾನ ಪಡಿಸುತ್ತಾರೆ.  ಅದೇ ರೀತಿ ಭಗವಂತ ಜೀವರನ್ನು ಸೃಷ್ಟಿಸಿ ತನ್ನದೇ ಆದ ಬ್ರಹ್ಮವನ (ಸಂಸಾರ)ದಲ್ಲಿ ಆಟ ಆಡಲು ಬಿಟ್ಟುಬಿಡುತ್ತಾನೆ.  ಜೀವರು ತಮ್ಮ ತಮ್ಮ ಕರ್ಮಗಳಿಗನುಸಾರವಾಗಿ ಸಂಸಾರದಲ್ಲಿ ಮುಳುಗಿ ಭಗವಂತನನ್ನು ಮರೆತು ಆಡತೊಡಗುತ್ತಾರೆ.  ಭಯದಿಂದ ಚೀರುತ್ತಾ ತಂದೆ-ತಾಯಿಯರನ್ನು ಹುಡುಕುವ ಕಂಗೆಟ್ಟ ಕಂದನಂತೆ ಜೀವಿಯೂ ಕೂಡ ತನಗೆ ಕಷ್ಟ ಬಂದಾಗ, ನೋವಾದಾಗ ಭಗವಂತನನ್ನು ಕರೆದರೆ ಹೆತ್ತವರಂತೆಯೇ ಧಾವಿಸಿ ಬಂದು ಭಗವಂತ ನಮ್ಮನ್ನು ರಕ್ಷಿಸುತ್ತಾನೆ.  ಆದರೆ ಕರೆಯುವ ಆ ಕರೆಯಲ್ಲಿ, ಶರಣಾಗತಿಯ, ಆರ್ತತೆಯ, ಅನನ್ಯತೆಯ ಭಾವವಿರಬೇಕು.  ನೀನೇ ಗತಿ ಎಂಬ ಅಳಲು ಬರಬೇಕು.  ಇದರ ಅರ್ಥವೆಂದರೆ ಭಗವಂತ ಈ ಜೀವನವನ್ನು ಸಾಧನೆಗಾಗಿಯೇ ಕೊಟ್ಟಿದ್ದಾನೆ, ಮೊದಲು ಸಂಸಾರದಲ್ಲಿದ್ದು ಅದರಲ್ಲಡಗಿರುವ ಭಯ, ದೋಷಗಳನ್ನು ಕಂಡುಕೊಂಡು ಮೋಕ್ಷ ಕೊಡುವ ಭಗವಂತನಿಗೆ ಶರಣಾಗತರಾಗಬೇಕು.  ಸಾಧನೆಯ ಮೂಲಕ ಅಪರೋಕ್ಷ ಜ್ಞಾನ ಪಡೆದ ಜೀವಿಯನ್ನು ತಂದೆ-ತಾಯಿಯಂತೆ ಬಂದೆತ್ತಿಕೊಂಡು ಹೋಗಿ, ಮೋಕ್ಷಾನಂದವನ್ನು ಕೊಟ್ಟು, ಜೊತೆಗೆ ಬೇಕಾದ್ದನ್ನೆಲ್ಲವನ್ನೂ ಕೊಟ್ಟು ರಕ್ಷಿಸುತ್ತಾನೆ.

ತತ್ಚಸುವ್ವಾಲಿಯಲ್ಲಿ ದಾಸರಾಯರು | ತಂದೆ ತಾಯಿಯು ಭ್ರಾತೃ ಬಂಧು ಸಖ ಗುರು ಪುತ್ರ | ಎಂದೆಂದು ನೀನೇ ಗತಿ ಗೋತ್ರ | ಗತಿ ಗೋತ್ರ ಇಹ ಪರದಿ | ಇಂದಿರಾರಾಧ್ಯ ಸಲಹೆಮ್ಮ || - ಲಕ್ಷ್ಮೀದೇವಿಯಿಂದಲೂ ಆರಾಧ್ಯನಾದ ಭಗವಂತನೇ ನೀನೆ ತಂದೆ, ತಾಯಿ, ಭ್ರಾತೃ, ಬಂಧು, ಬಳಗ, ಸಖ, ಗುರು, ಪುತ್ರ ಎಲ್ಲವೂ.  ಎಂದೆಂದಿಗೂ, ಯಾವ ಕಾಲಕ್ಕೂ, ಇಹದಲ್ಲೂ, ಪರದಲ್ಲೂ, ಲೋಕಾಲೋಕಗಳಲ್ಲೂ ನೀನೇ ಜ್ಞಾನವನ್ನಿತ್ತು ರಕ್ಷಿಸುವವನು ಎಂದಿದ್ದಾರೆ.

ಶ್ರೀ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ ತೃತೀಯ ಅಧ್ಯಾಯದ ಮೊದಲ ಶ್ಲೋಕದಲ್ಲಿ ಆಚಾರ್ಯರು "ಹರಿರೇವಪರೋ ಹರಿರೇವ ಗುರು ಹರಿರೇವ  ಜಗತ್ ಪಿತೃ ಮಾತೃಗತಿ" ಎನ್ನುತ್ತಾ ಭಗವಂತ ನಮಗೆ ಗುರು, ತಂದೆ, ತಾಯಿ ಸಮಸ್ತವೂ ಎಂದಿದ್ದಾರೆ.

ಶ್ರೀ ಪುರಂದರ ದಾಸರು ತಮ್ಮ  "ನಂಬಿದೆ ನಿನ್ನ ಪಾದವ ವೆಂಕಟರಮಣ" ಕೃತಿಯಲ್ಲಿ ನಿನ್ನ ಪಾದಾಂಬುಜ ಯುಗಳವನ್ನು ನಂಬಿರುವೆನು, ಚಂದದಿ ಎನ್ನನ್ನು ಸಲಹು ಎನ್ನುತ್ತಾರೆ.  ಇಲ್ಲಿ ಪಾದಗಳನ್ನು ನಂಬಿರುವೆನೆಂದರೆ, ಅದು ಅನ್ಯ ಗತಿಯಿಲ್ಲವು, ನೀನೇ ಗತಿಯು ಎಂಬ ಮಟ್ಟದಲ್ಲಿನ ನಂಬಿಕೆಯನ್ನು ಬಿಂಬಿಸುತ್ತದೆ.  ಇದೇ ಕೃತಿಯಲ್ಲಿ ಮುಂದುವರೆಯುತ್ತಾ ಭಗವಂತನನ್ನು |ತಂದೆಯು ನೀನೇ ತಾಯಿಯು ನೀನೇ | ಬಂಧು ಬಳಗವು ನೀನೇ | ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ | ಬಂದೆನ್ನ ಸಲಹೋ ಮುಕುಂದ ಮುರಾರಿ" ಎನ್ನುತ್ತಾ ಪ್ರಾಕೃತಿಕ ಪ್ರಪಂಚದ ಎಲ್ಲಾ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಮತ್ತು ಎಲ್ಲಾ ಸಂಬಂಧಗಳೂ ನೀನೊಬ್ಬನೇ, ನೀನೇ ಗತಿಯೆನಗೆ ಎಂಬ ಭಾವ ವ್ಯಕ್ತಪಡಿಸುತ್ತಾರೆ.  ಎರಡನೆಯ ಚರಣದಲ್ಲಿ "ಚಿಕ್ಕಂದು ಮೊದಲು ನಿನ್ನಯ ಪಾದವ | ಹೊಕ್ಕು ಜೀವಿಸುತಲಿಯೆನು | ಫಕ್ಕನೆ ಜ್ಞಾನದ ಅಕ್ಕರದಿಂದಲಿ | ಮಕ್ಕಳ ಮಾಣಿಕ್ಯ ರುಕ್ಮಿಣಿ ರಮಣ" ಎನ್ನುತ್ತಾ ಶ್ರೀ ಜಗನ್ನಾಥದಾಸರು ತಿಳಿಸಿದಂತಹ, ಸಾಧನೆಗಾಗಿಯೇ ಬಂದಿರುವಂತಹುದು ನಮ್ಮ  ಜೀವನ ಎಂಬುದನ್ನು ಪ್ರತಿಬಿಂಬಿಸುತ್ತಾರೆ.  ಕೊನೆಯಲ್ಲಿ "ಎನ್ನನ್ನು ನೀ ಮರೆಯದೇ ಸಲಹಿ ಕೃಪೆತೋರು" ಎಂದು ಅರ್ಥಿಯಿಂದ ಪ್ರಾರ್ಥಿಸುತ್ತಾರೆ.

ಶಿಶುವಿಗೆ ಬಂದ ಭಯಗಳ ಪರಿಹರಿಸಿ -  ತನ್ನನ್ನು ತಾನು ಸಂರಕ್ಷಿಸಿಕೊಳ್ಳಲಾಗದ ಪುಟ್ಟ ಕಂದ ಅನೇಕ ತರಹದ ಭಯಗಳಿಂದ ಬಾಧಿಸಲ್ಪಡುತ್ತದೆ.  ಕ್ರಿಮಿ ಕೀಟಗಳು, ಆಪತ್ತುಗಳು, ಹಸಿವು ನಿದ್ರೆಗಳು, ಚಳಿ ಗಾಳಿ ಹೀಗೆ ಹಲವು ರೀತಿಯ ಭಯಗಳಿಂದ ತತ್ತರಿಸುವ ಶಿಶುವನ್ನು ತಂದೆ ತಾಯಿಗಳು ತಮ್ಮ ಸುಭದ್ರ ಬಾಹುಗಳಿಂದ ರಕ್ಷಿಸಿ, ಅಕ್ಕರೆಯ ಬೆಚ್ಚನೆಯ ಸ್ಪರ್ಶದಿಂದ ಸಂತೈಸುತ್ತಾರೆ.  ಹಸಿವಾದಾಗ ಆಹಾರ ಕೊಡುತ್ತಾರೆ, ನಿದ್ರೆ ಬಂದಾಗ ಜೋಗುಳ ಹಾಡಿ, ಮಲಗಿಸುತ್ತಾರೆ.  ಹಾಗೇ ಭಗವಂತ ಕೂಡ ತನ್ನನ್ನು ನಂಬಿ ಶರಣಾದ ಭಕ್ತರನ್ನು ತಂದೆ-ತಾಯಿಯಂತೆಯೇ ಅಕ್ಕರೆಯಿಂದ, ಬೆಚ್ಚನೆಯ ಸ್ಪರ್ಶದಿಂದ, ತೋಳಲ್ಲಿ ಓಲಾಡಿಸಿ, ತೂಗಿ ರಕ್ಷಿಸುತ್ತಾನೆ.  ಸಕಲ ವಿಧದ ಭಯಗಳನ್ನೂ ಪರಿಹರಿಸಿ, ಸುಖ ಶಾಂತಿಯನ್ನು ಕರುಣಿಸುತ್ತಾನೆ.  ಹೇಗೆ ಯಾವುದೇ ರೀತಿಯಿಂದಲೂ ಮಗು ಪೀಡಿತನಾಗದಂತೆ ಹಿಂದೆ ಮುಂದೆ, ಎಡಬಲಗಳಲ್ಲಿದ್ದು, ಕಣ್ಣಲ್ಲಿ ಕಣ್ಣಿಟ್ಟು ತಂದೆ ತಾಯಿಗಳು ರಕ್ಷಿಸುತ್ತಾರೆಯೋ, ಹಾಗೆಯೇ ಭಗಂತನು ತನ್ನನ್ನು ನಂಬಿದ ಭಕ್ತರನ್ನು ಸದಾ, ಸರ್ವದಾ ಕಾಪಾಡುತ್ತಾನೆ.

ನಿಜ ಮಂದಿರದಿ - ಭಗವಂತನು ಬ್ರಹ್ಮಾಂಡದ ಸೃಷ್ಟಿಕರ್ತನು.  ಪ್ರಳಯ ಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ಸಮಸ್ತವನ್ನೂ ತನ್ನ ಉದರದಲ್ಲಿಟ್ಟುಕೊಂಡು ಜಗದ್ಭುಕ್ ಎನಿಸಿಕೊಂಡವನು.  ಹೀಗೆ ಸೃಷ್ಟಿಗೆ ಮುನ್ನ ಬ್ರಹ್ಮಾಂಡವಿದ್ದ ಜಾಗವೆಂದರೆ ಭಗವಂತನ ಉದರ ಮತ್ತು ಅದೇ ಜೀವರಾಶಿಗೆ ನಿಜ ಮಂದಿರವು.  ನಮ್ಮ ಕರ್ಮಗಳಿಗನುಗುಣವಾಗಿ ನಾವು ಕರ್ಮಭೂಮಿಯಾದ ಇಲ್ಲಿ ಬಂದಿದ್ದೇವೆ.  ಇದು ನಮ್ಮ ನಿಜವಾದ ಮಂದಿರವಲ್ಲ.  ನಿಷ್ಕಾಮ ಕರ್ಮಗಳನ್ನು ಮಾಡುತ್ತಾ, ನಿರಂತರವೂ ಭಗವಂತನ ಧ್ಯಾನ ಮಾಡುತ್ತಾ ನಮ್ಮ ನಿಜ ಮಂದಿರವಾದ ಭಗವಂತನ ಪಾದದಲ್ಲಿ ಶರಣಾಗುವುದೇ ನಮ್ಮ ಧ್ಯೇಯವಾಗಬೇಕು.  ತನ್ನವರಾದ ಭಕ್ತರ ಹೃತ್ಕಮಲವೇ ಭಗವಂತನಿಗೂ ನಿಜಮಂದಿರವು.  ಅಲ್ಲಿಯೇ ಸದಾ ಭಗವಂತನ ಆರಾಧನೆ ನಡೆಯುತ್ತಿರಬೇಕು.  ಜನನವಾಗುತ್ತಿದ್ದಂತೆಯೇ ಜೀವಿಗೆ ಅಹಂಮಮಗಳು ಅಂಟಿಕೊಳ್ಳುವುದರಿಂದ ಜೀವಿಯು ತನ್ನ ಜನ್ಮದ ಉದ್ದೇಶವನ್ನೇ ಮರೆತುಬಿಟ್ಟಿರುತ್ತಾನೆ.  ಅರಿಷಡ್ವರ್ಗಗಳ ಮುಷ್ಟಿಗೆ ಸಿಲುಕಿ ಭೌತಿಕ ಪ್ರಪಂಚವೇ ಸಮಸ್ತವೂ ಎಂದು ಭಾವಿಸುತ್ತಾ ತಾನು ವಾಸಿಸುತ್ತಿರುವ ಲೌಕಿಕ ಮನೆಯೇ ತನ್ನ ನಿಜವಾದ ಮನೆಯೆಂದು ತಿಳಿದುಕೊಂಡಿರುತ್ತಾನೆ.  ಆದರೆ ಅದು ಸತ್ಯವಲ್ಲ.  ಶ್ರೀ ಪುರಂದರದಾಸರು ತಮ್ಮ "ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ" ಎಂಬ ಕೃತಿಯಲ್ಲಿ ಇಲ್ಲಿರುವುದು ಕಳ್ಳಮನೆ, ಸುಳ್ಳುಮನೆ ಎಂದೆಲ್ಲಾ ವಿವರಿಸಿದ್ದಾರೆ.  ವೈಕುಂಠವಾಸಿಯಾದ ಪದುಮನಾಭನ ದಿವ್ಯ ಪಾದಾರವಿಂದಗಳೇ ನಮ್ಮ ನಿಜ ಮಂದಿರವಾಗಿದೆ.  ದಾಸರಾಯರು ತಮ್ಮ ಇನ್ನೊಂದು ಕೃತಿ "ಬ್ರಹ್ಮಾಂಡದೊಳಗೆ ಅರಸಿ ನೋಡಲು, ನಮ್ಮೂರೇ ವಾಸಿ" ಎನ್ನುತ್ತಾ ಜೀವಿಗಳ ನಿಜವಾದ ಊರು ರಮೆಯರಸನು ಸದಾ ವಾಸಿಸುವ ವೈಕುಂಠವೆಂದು ಸಾರಿದ್ದಾರೆ.  ಸೃಷ್ಟಿಯಾದಾಗ ಲಿಂಗದೇಹದ ಮೂಲಕ ಅಹಂಮಮಗಳು ಗಂಟುಬಿದ್ದು ಒದ್ದಾಡುತ್ತಾ, ಭೀತಿಗೊಳ್ಳುತ್ತಾ ಬದುಕುವ ಜೀವಿಗೆ ಭಗವಂತನಲ್ಲಿ ಶರಣಾಗತನಾಗುವುದೇ ಪರಿಹಾರ.  ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳೊಂದಿಗೆ ಸಾಧನೆ ಮಾಡುವ ಜೀವಿಗಳನ್ನು ಪರಮಾತ್ಮ ಮುಕ್ತಿಕೊಟ್ಟು ತನ್ನದೇ ನಿಜಮಂದಿರವಾದ ವೈಕುಂಠದಲ್ಲಿರಿಸಿ, ಸ್ವರೂಪಾನಂದವನ್ನೂ ಇತ್ತು ಸಲಹುತ್ತಾನೆ.

ಬೇಡಿದುದನಿತ್ತಾದರಿಸುವಂದದಲಿ - ಮಗುವಿನ ಹುಟ್ಟಿಗೆ ಕಾರಣವಾಗುವ ತನುವನ್ನು ಕೊಡುತ್ತಾನಾದ್ದರಿಂದ ಅವನು ತಂದೆಯಾಗುತ್ತಾನೆ.  ತಂದೆ ಶಬ್ದದಲ್ಲಿಯೇ ತನ್ - ತನು ಎಂಬ ಶಬ್ದವಡಗಿದೆ.  ತಂದೆ ಮೊದಲು ಮಗುವಿನ ಜನ್ಮಕ್ಕೆ ಕಾರಣನಾಗುತ್ತಾನೆ.  ಮುಂದೆ ಮಗುವಿಗೆ ಬ್ರಹ್ಮೋಪದೇಶ ಮಾಡುವ ಮೂಲಕ ಅವನಿಗೆ ಸಂಸ್ಕಾರ ಕೊಟ್ಟು, ಮತ್ತೊಮ್ಮೆ ತಂದೆಯಾಗುತ್ತಾನೆ, ವಿದ್ಯೆ ನೀಡಿ ಉಜ್ವಲ ಭವಿಷ್ಯದತ್ತ ಕೈ ಹಿಡಿದು ನಡೆಸುತ್ತಾ ತಂದೆಯಾಗುತ್ತಾನೆ, ಹಸಿವು ಬಾಯಾರಿಕೆಗಳನ್ನು ಪೂರೈಸಿ ತನುವಿಗೆ ಪೋಷಣೆ ನೀಡುತ್ತಾ ತಂದೆಯಾಗುತ್ತಾನೆ.  ಶಿಶುವಿಗೆ ಬರುವ ಎಲ್ಲಾ ರೀತಿಯ ಭಯಗಳನ್ನೂ, ಸಂಕಷ್ಟಗಳನ್ನೂ ಪರಿಹರಿಸುತ್ತಾ, ಕಾಪಾಡುತ್ತಾ ತಂದೆಯಾಗುತ್ತಾನೆ.  ಹೀಗೆ ಮಗುವಿದೆ ತಂದೆ ನಾನಾ ವಿಧದಲ್ಲಿ, ರೂಪದಲ್ಲಿ ತಂದೆಯೆನಿಸಿಕೊಳ್ಳುತ್ತಾನೆ.  ಮಗುವಿನ ರೂಪದಲ್ಲಿ ಬಂದ ಆತ್ಮ ತನ್ನ ತಂದೆಯಿಂದ ಈ ಎಲ್ಲಾ ತರಹದ ರಕ್ಷಣೆಯನ್ನೂ ಬೇಡುತ್ತದೆ ಮತ್ತು ಪಡೆದುಕೊಳ್ಳುತ್ತದೆ.  ಮಗುವಾಗಿ ಬೇಡಿದ ಪ್ರತಿಯೊಂದನ್ನೂ ಪೂರೈಸುವವನೇ ತಂದೆಯಾಗುತ್ತಾನೆ.  ಬೇಡಿದುದನೆಲ್ಲವನ್ನೂ ಇತ್ತು, ಜೊತೆಗೆ ಸಮ್ಮಾನವನ್ನೂ ಕೊಟ್ಟು, ಆದರಿಸುತ್ತಾ ಪ್ರೀತಿಯಿಂದ ಮಗುವನ್ನು ಬೆಳೆಸುವವನು ತಂದೆಯಾಗುತ್ತಾನೆ.  

ತಾಯಿಯಾದವಳು ತನ್ನ ಮಗುವನ್ನು ಪ್ರೀತಿಸುವ, ಆದರಿಸುವ ವಿಧಾನವೇ ಬೇರೆಯಾಗಿರುತ್ತದೆ.  ತನ್ನ ಶಿಶುವೆಂಬ ಮೋಹ ಪಾಶದಲ್ಲಿ ಸಿಲುಕಿ ಮಗುವನ್ನು ಮಮತೆಯ ಸೆರಗಿನಲ್ಲಿ ಬಚ್ಚಿಟ್ಟುಕೊಂಡು ಅತಿಯಾದ ಎಚ್ಚರಿಕೆಯಿಂದ ರಕ್ಷಿಸುತ್ತಾಳೆ.  ಮಗುವಿನಿಂದ ತನಗೆ ಯಾವುದೇ ರೀತಿಯ ತೊಂದರೆ ಬಂದರೂ, ನೋವಾದರೂ ತಾಯಿ ಸಹಿಸಿಕೊಳ್ಳುತ್ತಾಳೆ.  ಮಮತೆಯಿಂದ ಆದರಿಸುತ್ತಾಳೆ.  ತನಗಿಲ್ಲದಿದ್ದರೂ ಪರವಾಗಿಲ್ಲವೆಂದು ಆಹಾರ ಕೊಟ್ಟು ಸಂತಸ ಪಡುತ್ತಾಳೆ.  ಮಗು ಎಷ್ಟೇ ಕೆಟ್ಟವನಿದ್ದರೂ, ತಾಯಿಯ ಮಮತೆಯಲ್ಲಿ ಯಾವ ವ್ಯತ್ಯಾಸವೂ ಇರುವುದಿಲ್ಲ.  ಶ್ರೀ ಶಂಕರಾಚಾರ್ಯರು "ಕುಪುತ್ರ"ನಿರಬಹುದೇ ಹೊರತು, "ಕುಮಾತೆ" ಎಂದಿಗೂ ಇರುವುದಿಲ್ಲ ಎಂದು ತಿಳಿಸಿದ್ದಾರೆ.  ತಾಯಿ ಮಗು ಬೇಡಿದುದನೆಲ್ಲಾ ಕೊಟ್ಟು ಆದರಿಸುತ್ತಾಳೆ.  ಭಗವಂತನಾದರೂ ಅಷ್ಟೇ, ಅಪಾರ ಕರುಣೆಯಿಂದ ಭಕ್ತನ ಸಮಸ್ತ ಅಪರಾಧಗಳನ್ನೂ ಮರೆತು, ಧಾವಿಸಿ ಬಂದು ಬೇಡಿದುದನಿತ್ತು ಆದರಿಸುತ್ತಾನೆ.

ದಾಸರಾಯರು ತಮ್ಮ ತತ್ವಸುವ್ವಾಲಿಯಲ್ಲಿ "ತಂದೆ ಮಕ್ಕಳನು ಪೊರೆವಂದದಲಿ ಶ್ರೀಕಾಂತ | ಎಂದೆಂದು ತನ್ನ ಭಕುತರ ಸಲಹುವ" ಎಂದು ತಿಳಿಸಿದ್ದಾರೆ.

ದಾಸರಾಯರ ತತ್ವಸುವ್ವಾಲಿಯಲ್ಲಿ " | ಅಚ್ಯುತನೆ ನಿನ್ನಂಥ ಹುಚ್ಚು ದೊರೆಗಳ ಕಾಣೆ | ಕಚ್ಚಿ ಬೈದೊದ್ದ ಭಕತರ | ಭಕತರಪರಾಧಗಳ ತುಚ್ಛಗೈದವರ ಸಲಹಿದಿ || - ಭಗವಂತನ ಮಮತೆಯ ಎಲ್ಲೆಯನ್ನು ನಾವು ಅಳೆಯಲಾಗುವುದೇ ಇಲ್ಲ.  ಕಚ್ಚಿ ರುಚಿ ನೋಡಿ ಫಲಗಳನ್ನು ಸಮರ್ಪಿಸಿದ ಶಬರಿ, ಬಾಲ್ಯದಿಂದಲೂ ನಿಂದಿಸಿದ ಶಿಶುಪಾಲ, ಕಾಲಿನಿಂದ ಎದೆಗೇ ಒದ್ದ ಭೃಗುಮುನಿಯಂತಹ ಭಕ್ತರನ್ನೆಲ್ಲಾ ರಕ್ಷಿಸಿ, ಅವರು ಬೇಡಿದುದನಿತ್ತು ಆದರಿಸಿದೆ ಎನ್ನುತ್ತಾರೆ.

ಹಿಂದೆ ಮುಂದೆಡಬಲದಿ - ನಮ್ಮ ಹಿಂದೆ ಮುಂದೆ, ಎಡಕ್ಕೆ ಬಲಕ್ಕೆ, ಒಳಗೆ ಹೊರಗೆ ಎಲ್ಲಾ ಕಡೆಯಲ್ಲೂ ಸರ್ವವ್ಯಾಪ್ತನಾದ ಭಗವಂತನು ಇದ್ದು, ನಮ್ಮನ್ನು ರಕ್ಷಿಸುತ್ತಿದ್ದಾನೆ.  ಈ ಜನ್ಮದ ತಂದೆ ತಾಯಿಗಳು ಈಗಷ್ಟೇ ಸೀಮಿತರು.  ಅವರು ಹಿಂದಿನ ಜನ್ಮದಲ್ಲೂ ಇರಲಿಲ್ಲ, ಮುಂದಿನ ಜನ್ಮದಲ್ಲೂ ಇರುವುದಿಲ್ಲ.  ಆದರೆ ಭಗವಂತ ನಮ್ಮ ಹಿಂದಿನ ಎಲ್ಲಾ ಜನ್ಮಗಳಲ್ಲೂ ತಂದೆತಾಯಿಯಂತೆ ಕಾಪಾಡಿದ.  ಮುಂದಿನ ಎಲ್ಲಾ ಜನ್ಮಗಳಲ್ಲೂ ಕಾಪಾಡುತ್ತಾನೆ.  ಎಡಬಲದಿ ಎಂದರೆ ನಮ್ಮ ದೇಹದೊಳಗೆ ಎಡಬಲ ಭಾಗಗಳಲ್ಲಿರುವ ೭೨೦೦೦ ನಾಡಿಗಳಲ್ಲಿ ತನ್ನ ಪರಿವಾರವಾದ ತತ್ವಾಭಿಮಾನಿ ದೇವತೆಗಳ ಸಹಿತವಾಗಿ ಸದಾ ರಕ್ಷಿಸುತ್ತಿದ್ದಾನೆ ಎಂದರ್ಥವಾಗುತ್ತದೆ.

ಸರ್ವಾಂತರ್ಯಾಮಿಯಾದ ಭಗವಂತನ ಇರುವನ್ನು ಶ್ರೀ ಪುರಂದರದಾಸರು ತಮ್ಮ "ಒಳಗೆ ವಿಠಲ ಹೊರಗೆ ವಿಠಲ, ಒಳಗೆ ಹೊರಗೆ ವಿಠಲಾ ವಿಠಲ, ಎಡಕೆ ವಿಠಲ ಬಲಕೆ ವಿಠಲ, ಎಡಕೆ ಬಲಕೆ ವಿಠಲಾ ವಿಠಲಾ" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.  ಮುಂದುವರೆಯುತ್ತಾ ಬಂಧು ವಿಠಲ ಬಳಗ ವಿಠಲ ಎನ್ನುತ್ತಾ, ನಮ್ಮ ಸರ್ವಸ್ವವೂ ಭಗವಂತನೇ, ನಮ್ಮ ಧ್ಯಾನ ಸದಾ ಅವನ ಪಾದದಲ್ಲಿಯೇ ನೆಲೆಸಿರಬೇಕೆಂಬುದನ್ನು ಸೂಚಿಸಿದ್ದಾರೆ.  ಶ್ರೀ ವಿಜಯದಾಸರು ತಮ್ಮ ಒಂದು ಉಗಾಭೋಗದಲ್ಲಿ, ತಮ್ಮದೇ ಅನುಭವವನ್ನು ಹೀಗೆ ಹೇಳಿದ್ದಾರೆ 
ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಗೆ | ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ |
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು | ಹಿಂದು ಮುಂದುಪದ್ರವವಾಗದಂತೆ |
ಇಂದಿರೆರಮಣ ಕಾಯುತ್ತಲಿರೆ | ಎನಗಾವ ಭಯವಿಲ್ಲ ಬಂಧಕಗಳಿಲ್ಲ |
ಧನ್ಯ ಧನ್ಯ ಕಂದರ್ಪನಯ್ಯ ಸಿರಿ ವಿಜಯವಿಠಲರಾಯ | ಆಪತ್ತು ಬರಲೀಸ ನೋಡಿ || - ಇಂದಿರೆರಮಣನಾದ ಭಗವಂತನು ಕೈಯಲ್ಲಿ ಖಡ್ಗ ಹಿಡಿದು ನಿಂತು ಹಿಂದೆ ಮುಂದೆಲ್ಲೂ ಉಪದ್ರವವಾಗದಂತೆ ಕಾಯುತ್ತಾ, ರಕ್ಷಿಸುತ್ತಿರುವಾಗ ಯಾವ ತಾಪತ್ರಯಗಳ ಭಯವೂ ನಮ್ಮನ್ನು ಕಾಡುವುದಿಲ್ಲ ಮತ್ತು ನಮಗೆ ಯಾವ ಆಪತ್ತೂ ಬರಲೀಸನು.

ಭಗವದ್ಗೀತೆಯ ೧೪ನೆಯ ಅಧ್ಯಾಯದ  ೪ನೇ ಶ್ಲೋಕದಲ್ಲಿ ಭಗವಂತ ಅರ್ಜುನನಿಗೆ
ಸರ್ವಯೋನಿಷು ಕೌಂತೇಯ, ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ || -  ಸಮಸ್ತ ವಿಶ್ವದ ಅಭಿವ್ಯಕ್ತಿಯ ಒಟ್ಟು ಕಾರಣವೇ ಮಹತ್ ತತ್ವ ಮತ್ತು ಅದನ್ನೇ ’ಬ್ರಹ್ಮನ್’ ಎಂದು ಕರೆಯುತ್ತಾರೆ.     ಎಲ್ಲಾ ಜೀವರಾಶಿಗಳೂ ಉತ್ಪತ್ತಿಯಾಗುವುದು ಪ್ರಕೃತಿ ಮಾತೆಯಿಂದಲಾದ್ದರಿಂದಲೇ,  ಬ್ರಹ್ಮ ರೂಪವಾದ ಮೂಲ ಪ್ರಕೃತಿಯು ಸಮಸ್ತ ಭೂತಗಳ ಯೋನಿಯಾಗಿದೆ.  ನಾನಾ ಪ್ರಕಾರದ ಎಲ್ಲ ಯೋನಿಗಳಲ್ಲಿಯೂ ಹುಟ್ಟುವ ಶರೀರಧಾರೀ ಪ್ರಾಣಿಗಳಿಗೆಲ್ಲರಿಗೂ ಗರ್ಭ ಧರಿಸುವ ತಾಯಿಯಾಗಿ ಪ್ರಕೃತಿಯಿದ್ದರೆ ಬೀಜವನ್ನು ಸ್ಥಾಪಿಸುವ ತಂದೆಯಾಗಿ ನಾನಿದ್ದೇನೆ ಎನ್ನುತ್ತಾ ತಾನೇ ತಂದೆಯೂ ಹೌದು ತಾಯಿಯೂ ಹೌದು ಎಂದು ತಿಳಿಸಿದಿದ್ದಾನೆ.

ಮುಂಡಕೋಪನಿಷತ್ತಿನಲ್ಲಿ "ಪುಮಾನ್ ರೇತಃಸಿಂಚತಿ ಯೋಷಿತಾಯಾಂ ಬಹ್ವೀಃ ಪ್ರಜಾಃ ಪುರುಷಾತ್ಸಂಪ್ರಸೂತಾಃ" - ಇಲ್ಲಿ ಪುಮಾನ್ ಎಂದರೆ ಗಂಡಿನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಮತ್ತು ಯೋಷಿತಾ ಎಂದರೆ ಹೆಣ್ಣಿನಲ್ಲಿ ವಿಶೇಷವಾಗಿ ಸನ್ನಿಹಿತಳಾಗಿರುವ ಲಕ್ಷ್ಮಿದೇವಿಯು.  ಜಡಪ್ರಕೃತಿಯ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ಭಗವಂತನು ಬೀಜಪ್ರದ ಮಾಡುತ್ತಾನೆ.  ತಾಯಿ ಲಕ್ಷ್ಮೀದೇವಿಯು ಆ ಬೀಜಕ್ಕೆ ಒಂದು ಆಕಾರ ಕೊಡುತ್ತಾಳೆ.  ಸ್ತ್ರೀ ಗರ್ಭಿಣಿಯಾದಾಗಲೇ ಅವಳಲ್ಲಿ ಲಕ್ಷ್ಮೀದೇವಿಯು ಪೂರ್ಣ ಪ್ರಮಾಣದಲ್ಲಿ ನೆಲೆಸುವುದು.  ತಾಯಿಯ ಗರ್ಭದಲ್ಲಿ ಬೆಳೆಯುವ ಶಿಶು ನೆಲೆಸಿರುವ ಗರ್ಭವನ್ನು ಗರ್ಭಗುಡಿಯೆಂದೇ ಕರೆದಿದ್ದಾರೆ ಮತ್ತು ಆ ಶಿಶುವನ್ನು ಬೆಳೆಸುವವನು ಭಗವಂತನೆಂದು ಆರಾಧಿಸುತ್ತಾರೆ.  ಇದು ಅತ್ಯಂತ ಭವ್ಯವಾದ, ದಿವ್ಯವಾದ ಸುಂದರವಾದ ಅನುಸಂಧಾನವಾಗಿದೆ.  (ಆಧಾರ - ಶ್ರೀ ಬನ್ನಂಜೆಯವರ ’ಭಗವದ್ಗೀತಾ’ ವಿವರಣೆ).  ಹೀಗೆ ಭಗವಂತನು ಜಡಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ನೆಲೆಸಿ ತಾಯಿಯೆನಿಸಿಕೊಳ್ಳುತ್ತಾನೆ ಮತ್ತು ಗರ್ಭದಾನ ಮಾಡಿ ಉತ್ಪತ್ತಿಗೆ ಕಾರಣನಾಗಿ ತಂದೆಯೂ ಆಗುತ್ತಾನೆ. 

ಒಳಹೊರಗಿಂದಿರೇಶನು ತನ್ನವರನೆಂದೆಂದು ಸಲಹುವನು - ಭಗವಂತನು ಜೀವಿಯ ಒಳಗೂ, ಹೊರಗೂ, ಸರ್ವಾಂತರ್ಯಾಮಿಯಾಗಿದ್ದು ಅತಿ ಜತನದಿಂದ ರಕ್ಷಿಸುತ್ತಾನೆ.  ಒಳ ಹೊರಗೆಂಬ ಪದಗಳನ್ನು ಆಳವಾಗಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ವಿಶೇಷವಾದ ಆಧ್ಯಾತ್ಮಿಕ ಅರ್ಥಗಳು ಗೋಚರಿಸುತ್ತವೆ.  ಮೇಲೆ ತಿಳಿಸಿದಂತೆ ಹಿಂದೆ ಎಂದರೆ ನಮ್ಮ ಹಿಂದಿನ ಜನ್ಮಗಳಲ್ಲೂ ಮುಂದೆ ಎಂದರೆ ನಮ್ಮ ಮುಂದಿನ ಜನ್ಮಗಳಲ್ಲೂ ಭಗವಂತನೇ ಸದಾ ರಕ್ಷಕನು ಎಂಬರ್ಥ.  ಹಾಗೇ ಈಗಿರುವ ಜನ್ಮದ ವಿಚಾರಕ್ಕೆ ಬಂದಾಗ ಅವನು ಒಳಗೂ ಹೊರಗೂ ಇದ್ದು ರಕ್ಷಿಸುತ್ತಿದ್ದಾನೆ ಎಂದು ತಿಳಿಯಬೇಕು.  ಒಳಗೆ ಎಂದರೆ ಲಯಕಾಲದಲ್ಲಿ ಸರ್ವವನ್ನೂ ಭಕ್ಷಿಸಿ ಜಗದ್ಭುಕ್ ಎನಿಸಿಕೊಂಡ ಪರಮಾತ್ಮ ಸೂಕ್ಷ್ಮ ರೂಪದಲ್ಲಿದ್ದ ಜೀವರಾಶಿಯನ್ನೂ ಉದರದಲ್ಲಿಟ್ಟುಕೊಂಡು ಕಾಪಾಡುತ್ತಾನೆ ಎಂದಾಗುತ್ತದೆ.  ಅಂತೆಯೇ ಸೃಷ್ಟಿ ಕಾಲದಲ್ಲಿ ಹೊರಗೆ ಬಂದಾಗಲೂ ಸರ್ವವ್ಯಾಪ್ತನಾಗಿ, ಸರ್ವಾಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುತ್ತಾನೆ.  ಇಂದಿರೇಶನು ಸಮಸ್ತ ಜೀವರಾಶಿಯನ್ನೂ ತನ್ನವರೆಂದೇ, ತನ್ನ ಮಕ್ಕಳೆಂದೇ ಸಲಹುವನು.

ಶ್ರೀ ಜಗನ್ನಾಥ ದಾಸರು ತಮ್ಮ ತತ್ವಸುವ್ವಾಲಿಯಲ್ಲಿ
ಜಗದುದರ ನೀನಾಗಿ ಜಗದೊಳಗೆ ನೀನಿಪ್ಪೆ
ಜಗದಿ ಜೀವರನು ಸೃಜಿಸು-ವಿ | ಸೃಜಿಸಿ ಜೀವರೊಳಿದ್ದು
ಜಗದನ್ನನೆಂದು ಕರೆಸು-ವಿ || - ಜಗತ್ತನ್ನೇ ನಿನ್ನ ಹೊಟ್ಟೆಯಲ್ಲಿಟ್ಟುಕೊಂಡಿದ್ದರೂ, ಅದರೊಳಗೂ ನೀನಿದ್ದು, ನೀನೇ ನೀನಾಗಿಯೂ ಇದ್ದು, ನೀನು ಸೃಷ್ಟಿ ಮಾಡಿದ ಜಗತ್ತಿನಲ್ಲೂ ಅನೇಕ ರೂಪಗಳಿಂದ ಇದ್ದು, ಸರ್ವಪ್ರಕಾರದಿಂದಲೂ ನಿಯಮನ ಮಾಡುತ್ತಿರುವೆ.  ಜೀವರನ್ನು ಹುಟ್ಟಿಸುವವನೂ ನೀನೇ ಅವರೊಳಗಿದ್ದೂ ಕಾರ್ಯಗಳನ್ನು ಮಾಡಿ, ಮಾಡಿಸುವವನೂ ನೀನೇ ಎಂದಿದ್ದಾರೆ.

ಆಗಸದವೋಲೆತ್ತ ನೋಡಿದರು - ಶ್ರೀಹರಿಯು ಸರ್ವವ್ಯಾಪ್ತನೂ, ಸರ್ವಾಂತರ್ಯಾಮಿಯೂ ಆಗಿರುವುದರಿಂದ ನಾವು ಎತ್ತೆತ್ತ ನೋಡಿದರೂ ಕಾಣುವ ಆಗಸದಂತೆ ನಮ್ಮನ್ನು ಸಂರಕ್ಷಿಸುತ್ತಿದ್ದಾನೆ ಎಂಬ ಸುಂದರವಾದ ಉಪಮೆಯನ್ನು ಕೊಟ್ಟಿದ್ದಾರೆ ಜಗನ್ನಾಥದಾಸರು.  ಭಾಗವತ ತೃತೀಯ ಸ್ಕಂದದಲ್ಲಿ ಬರುವ ವಿವರಣೆಯಲ್ಲಿ ಸೃಷ್ಟಿಯ ಪ್ರಾರಂಭದಲ್ಲಿ ಭಗವಂತನು ಜಡಪ್ರಕೃತಿಗೆ ಅಭಿಮಾನಿಯಾದ ಲಕ್ಷ್ಮೀದೇವಿಯಲ್ಲಿ ಗರ್ಭದಾನ ಮಾಡಿದ ಪರಿಣಾಮವಾಗಿ ’ಮಹತ್ತತ್ತ್ವ’ವೂ, ತದಭಿಮಾನಿ ಬ್ರಹ್ಮದೇವರೂ ಸೃಷ್ಟಿಯಾದರೆಂದು ತಿಳಿಸಿದೆ.  ಭಗವಂತನ ಇಚ್ಛೆಯಂತೆ ಮಹತ್ತತ್ತ್ವವು ವಿಕಾರಹೊಂದಿ ಮೂರು ಬಗೆಯ ಅಹಂಕಾರಗಳಾದ ವೈಕಾರಿಕಾಹಂಕಾರ, ತೈಜಸಾಹಂಕಾರ ಮತ್ತು ತಾಮಸಾಹಂಕಾರಗಳು ಹುಟ್ಟಿದವು.  ತಾಮಸಾಹಂಕಾರದಿಂದ ಪಂಚಭೂತಗಳು ಹುಟ್ಟಿದವು.  ಪಂಚಭೂತಗಳಲ್ಲಿ ಒಂದಾದ ’ಆಕಾಶ’ವು (ಆಗಸ) ಹುಟ್ಟಿತು.  ಪದಾರ್ಥಗಳನ್ನು ತಿಳಿಸಿಕೊಡುವುದು, ಶ್ರೀಹರಿಯನ್ನು ತಿಳಿಸಿಕೊಡುವುದು ಆಕಾಶದ ಸ್ವಾಭಾವಿಕ ಲಕ್ಷಣವಾಗಿದೆ.  ಆಕಾಶವು ಜೀವರಾಶಿಗಳಿಗೆ ಅವಕಾಶ ಕೊಡುವಂತಹುದು.  ಒಳಹೊರಗೆ ದಿಗ್ರೂಪವಾಗಿದ್ದು, ಪ್ರಾಣಾದಿ ಪಂಚ ವಾಯುಗಳೂ, ಇಂದ್ರಿಯಗಳೂ, ಜೀವರೂ ವಾಸ ಮಾಡುವುದಕ್ಕೆ ಅರ್ಹವಾಗಿರುವಂತಿರುವುದು.  ಬ್ರಹ್ಮಾಂಡದ ಸೃಷ್ಟಿಗೆ ಮುನ್ನವೇ ಬ್ರಹ್ಮಾಂಡದ ಹೊರವಲಯದಲ್ಲಿ ಬ್ರಹ್ಮಾಂಡಕ್ಕೆ  ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಅಹಂಕಾರ ಮತ್ತು ಮತ್ತತ್ತ್ವದ ಆವರಣಗಳು ಸೃಷ್ಟಿಯಾದವು.  


ಪಂಚಭೂತಗಳ ಆವರಣ ಸೃಷ್ಟಿಯನ್ನು ಶ್ರೀ ವಾದಿರಾಜಗುರುಗಳು ತಮ್ಮ ಸೃಷ್ಟಿ ಪ್ರಕರಣ ಸುಳಾದಿಯಲ್ಲಿ "ತಾಮಸದಿಂದ ಪಂಚಭೂತಂಗಳ ಸೃಜಿಸಿ | ಯೋಮಾಂತರದಿ ಪಂಚದೇವರ ಕೂಡಿಸಿ" ಎಂದು ವರ್ಣಿಸಿದ್ದಾರೆ.  ಆಕಾಶವು ನಿರಾಕಾರವೂ ಅವ್ಯಕ್ತವೂ ಆಗಿದೆ ಆದರೆ ಸರ್ವವ್ಯಾಪ್ತವಾಗಿದೆ.

ಭಗವದ್ಗೀತೆಯಲ್ಲಿ "ಯಥಾ ಸರ್ವಗತಂ ಸೌಕ್ಷ್ಮ್ಯಾದಾಕಾಶಂ ನೋಪಲಿಪ್ಯತೇ" - ಪಂಚ ಮಹಾಭೂತಗಳಲ್ಲಿ ಆಕಾಶ ಭೂತವು ಅತ್ಯಂತ ಸೂಕ್ಷ್ಮವಾದುದು.  ಯಾವುದೇ ವಸ್ತುವಾದರೂ ಸೂಕ್ಷ್ಮವಾದಷ್ಟೂ ಅದರ ವ್ಯಾಪ್ತಿ ವಿಸ್ತರಿಸುತ್ತದೆ ಮತ್ತು ಅದು ಬೇರೆ ಯಾವುದೇ ವಸ್ತುವಿನಿಂದಲೂ ಮಲಿನವಾಗದೆ ಅತ್ಯಂತ ಪವಿತ್ರವಾಗಿರುತ್ತದೆ.  ಹೀಗೆ ಸರ್ವವ್ಯಾಪ್ತವಾದ ಆಗಸದಂತೆ ಭಗವಂತನೂ ಸರ್ವ ವ್ಯಾಪ್ತನಾಗಿ ನಮ್ಮನ್ನು ಸದಾ ಸರ್ವದಾ ರಕ್ಷಿಸುತ್ತಿದ್ದಾನೆ.  ಎತ್ತೆತ್ತ ನೋಡಿದರೂ ಅಲ್ಲಿ ಭಗವಂತನ ಸನ್ನಿಧಿ ತಿಳಿಯುತ್ತದೆ.

ತತ್ವಸುವ್ವಾಲಿಯಲ್ಲಿ ಶ್ರೀ ಜಗನ್ನಾಥ ದಾಸರು ಆಗಸದವೋಲು, ಸರ್ವವ್ಯಾಪ್ತನಾದ ಭಗವಂತನನ್ನು "ನೀನಿಲ್ಲದಾಸ್ಥಾನ ಈ ನಳಿನಜಾಂಡದೊಳು ನಾನೆಲ್ಲಿ ಕಾಣೆ ನರಸಿಂಹ" ಎಂದು ವರ್ಣಿಸಿದ್ದಾರೆ.   



ಚಿತ್ರಕೃಪೆ : ಅಂತರ್ಜಾಲ


No comments: