Tuesday, February 18, 2014

ಕರುಣಾ ಸಂಧಿ - ೧೭ ನೇ ಪದ್ಯ

ಜನಪ ಮೆಚ್ಚಿದರೀವ ಧನವಾ
ಹನ ವಿಭೂಷಣವಸನ ಭೂಮಿಯ
ತನು ಮನೆ ಗಳಿತ್ತಾದರಿಪರುಂಟೇನೋ ಲೋಕದೊಳು |
ಅನವರತ ನೆನೆವವರನಂತಾ
ಸನವೆ ಮೊದಲಾದಾಲಯದೊಳಿ
ಟ್ಟುಣುಗನಂದದವರ ವಶನಾಗುವ ಮಹಾಮಹಿಮ  ||೧೭||



ಪ್ರತಿಪದಾರ್ಥ : ಜನಪ - ಅರಸು, ಮೆಚ್ಚಿದರೆ - ಇಷ್ಟವಾದರೆ, ಧನ ವಾಹನ ವಿಭೂಷಣ ವಸನ ಮತ್ತು ಭೂಮಿ - ಧನಕನಕ ಕುದುರೆ ಆನೆ ಮೊದಲಾದ ವಾಹನ ಆಭರಣಗಳು ವಸ್ತ್ರಗಳು ಜಮೀನು ಇತ್ಯಾದಿಗಳನ್ನು ಕೊಡುವನು, ತನು ಮನೆಗಳಿತ್ತಾದರಿಪರುಂಟೇನೋ  - ಶ್ರೀಹರಿಯು ತನ್ನನ್ನೇ ಕೊಡುವುದಲ್ಲದೇ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠ ಎಂಬ ಭಗವಂತನ ಮಂದಿರಗಳು ಎಂದರ್ಥ,  ಲೋಕದೊಳು - ಈ ಜಗತ್ತಿನಲ್ಲಿ, ಅನವರತ ನೆನೆವವರ - ಸದಾ ನಿರಂತರವಾಗಿ ಶ್ರೀಹರಿಯನ್ನೇ ಧ್ಯಾನಿಸುವವರನ್ನು, ಅನಂತಾಸನವೆ ಮೊದಲಾದ ಆಲಯದೊಳಿಟ್ಟು - ತನ್ನ ಮಂದಿರಗಳಾದ ಅನಂತಾಸನ ಶ್ವೇತದ್ವೀಪ ಮತ್ತು ವೈಕುಂಠಗಳೆಂಬ ಮಂದಿರಗಳಲ್ಲಿ ನೆಲೆಸುವಂತೆ ಮಾಡಿ, ಅಣುಗನಂದದಲಿ ಅವರ ವಶನಾಗುವ - ಪುಟ್ಟ ಮಗುವಿನಂತೆ ಭಗವಂತನು ಮುಕ್ತರಾದ ಜೀವಿಗಳ ವಶಕ್ಕೆ ಸಿಲುಕುವನು, ಮಹಾಮಹಿಮ - ಅಂತಹ ಮಹಿಮಾವಂತನಾಗಿರುವನು.

ಲೌಕಿಕದಲ್ಲಿ ಪ್ರಭುವಾದವನು ಕಷ್ಟಪಟ್ಟು, ಮೈ ಮುರಿದು ದುಡಿಯುವ ಸೇವಕರಿಗೆ ಹಣ ಕೊಡಬಹುದು, ವಾಹನಗಳನ್ನು ಕೊಡಬಹುದು, ಒಡವೆ ಬಟ್ಟೆಗಳನ್ನೂ, ಭೂಮಿಯನ್ನೂ ಕೊಡಬಹುದು.  ಆದರೆ ದೇಹ ಮನಸ್ಸು ಕೊಡಲಿಕ್ಕವನಿಗೆ ಸಾಧ್ಯವಿಲ್ಲ.  ಅಂತಹುದನ್ನು ಯಾವ ದೊರೆ ಕೊಟ್ಟಿದ್ದಾನೆ ?  ಪರಮಾತ್ಮನಿಗೊಬ್ಬನಿಗೇ ಅದನ್ನು ಕೊಡಲು ಸಾಧ್ಯವಿರುವುದು.  ಹೀಗೆ ಸದಾ ಸ್ಮರಿಸುವ ಭಕ್ತರನ್ನು ಅನಂತಾಸನದಂತಹ ಆಲಯದೊಳಗಿಟ್ಟು ತಾನು ಮಗುವಿನಂತೆ  ಈ ಮಹಾಮಹಿಮನು ಭಕ್ತರ ವಶನಾಗುವನು.  ಪ್ರಾಕೃತ ಲೋಕದ ದೊರೆಯು ನಮ್ಮನ್ನು ಮೆಚ್ಚಿದರೆ ಒಡವೆ-ವಸನಗಳನ್ನು ಕೊಟ್ಟು ಆದರಿಸಬಹುದು.  ಆದರೆ ಹರಿಯು ಎಲ್ಲಾ ಮೋಹವನ್ನೂ ಹರಿಸುವಂತಹ ಜ್ಞಾನ, ಭಕ್ತಿ, ವೈರಾಗ್ಯಗಳನ್ನು ಕೊಟ್ಟು ನಮಗೆ ತನ್ನ ಲೋಕಗಳಲ್ಲಿ ಇರುವಂತಹ ವೈಭವವನ್ನು ಕೊಡುತ್ತಾನೆ.  ಇಂತಹ ಕಾರ್ಯಕ್ಕೆ ನಾವು ಸಿದ್ಧರಾಗಲು ನಮಗೆ ದೇಹ, ಮನಸ್ಸು ಎಲ್ಲವನ್ನೂ ಕೊಟ್ಟಿರುತ್ತಾನೆ.  ಪರಮಾತ್ಮನು ನಮ್ಮ ಜೊತೆಗೆ ಮಗುವಿನಂತೆ ಇರುತ್ತಾನೆ, ಮಿತ್ರನಂತೆ ಸಹಾಯ ಮಾಡುತ್ತಾನೆ.  ತಂದೆಯಂತೆ ನಮ್ಮನ್ನು ರಕ್ಷಿಸುತ್ತಾನೆ, ಪ್ರಭುವಿನಂತೆ ಕಾಪಾಡುತ್ತಾನೆ.  ನಾವು ನಿಜಕ್ಕೂ ಅವನ ವಶವಾದರೆ ನಮ್ಮನ್ನು ತನ್ನ ಮಗುವಿನಂತೆಯೇ ಕಾಪಾಡುತ್ತಾನೆ ಮತ್ತು ತಾನೂ ನಮ್ಮ ಮಗುವಾಗಿ ವಶನಾಗುತ್ತಾನೆ.

ಜನಪ ಮೆಚ್ಚಿದರೀವ -  ರಾಜಾ ಹರಿಶ್ಚಂದ್ರನಂತಹವರು ತಾವು ಕೊಟ್ಟ ಮಾತು ಪಾಲಿಸುವುದಕ್ಕಾಗಿ, ಸತ್ಯ, ಧರ್ಮವನ್ನು ನಿಲ್ಲಿಸುವುದಕ್ಕಾಗಿ, ಶರಣಾಗತರಾದವರನ್ನು ಕಾಪಾಡುವುದಕ್ಕಾಗಿ ತಮ್ಮ ಸರ್ವಸ್ವವನ್ನೂ, ಪ್ರಾಣವನ್ನೂ ಕೊಡಲು ಸಿದ್ಧರಿದ್ದರು.  ಆದರೆ ಅವರು ತಮ್ಮ ಅರಮನೆಯನ್ನು ಯಾರಿಗೂ ಕೊಡಲಿಲ್ಲ, ಇವೆಲ್ಲಾ ತಮ್ಮ ಸಾಧನೆಗಾಗಿಯಾಗಿಯೂ ಪುಣ್ಯ ಸಂಪಾದನೆಗಾಗಿಯೂ ಮಾಡಿದರು.  ರಾಜನೇ ಆದರೂ ತಮ್ಮ ಹತ್ತಿರ ಇರುವ ವಸ್ತುಗಳು ತಮ್ಮ ಉಪಯೋಗಕ್ಕೆ ಆಗಿ ಹೆಚ್ಚಿಗೆಯಿದ್ದರೆ ಕೊಡಬಹುದು.  ಹಾಗೆ ಕೊಡುವುದೂ ಅಪರೂಪವೇ ಆಗಿರುತ್ತದೆ. ಆದರೆ ಭಗವಂತನ ಕರುಣೆಗೆ ಯಾವ ಮಿತಿಯೂ, ದೃಷ್ಟಾಂತವೂ ಇಲ್ಲ.  ಜಗತ್ತಿಗೇ ಜನಪನಾದ ಭಗವಂತ, ನಿರಂತರ ಧ್ಯಾನಿಸುವ ತನ್ನ ಭಕ್ತರಿಗೆ ತನ್ನ ಮನೆ, ಮನ, ತನು ಸಕಲವನ್ನೂ ಕೊಡುವನು.

ತನುಮನೆಗಳಿತ್ತಾದರಿಪರುಂಟೇನೋ - ದೇಶವನ್ನಾಳುವ ರಾಜನು ತನಗೆ ಅತ್ಯಂತ ಪ್ರಿಯರಾದವರಿಗೆ ಹಣ, ವಾಹನ, ಬಂಗಾರ, ವಸ್ತ್ರ, ಭೂಮಿ, ಇನ್ನೂ ಏನನ್ನು ಬೇಕಾದರು ಕೊಡುತ್ತಾನೆ.  ತಾನು ಮೆಚ್ಚಿದ  ಆ ವ್ಯಕ್ತಿ ಅದೆಷ್ಟೇ ಪ್ರಿಯನಾದವನಾದರೂ ಅವನಿಗೆ ತನ್ನ ಅರಮನೆಯನ್ನಾಗಲೀ ಅಥವಾ ತನ್ನ ಪಟ್ಟಣವನ್ನಾಗಲೀ ಕೊಡುವುದಿಲ್ಲ ಮತ್ತು ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುವುದಿಲ್ಲ.  ಆದರೆ  ಅತ್ಯಂತ ಕರುಣಾಮಯಿಯಾದ ಭಗವಂತನು ಪ್ರಾಪಂಚಿಕ ಭೋಗಗಳನ್ನೂ ಕೊಡುತ್ತಾನೆ, ಧನಕನಕಾದಿಗಳನ್ನೂ ಕೊಡುತ್ತಾನೆ.  ಸದಾ ತನ್ನನ್ನೇ ಧ್ಯಾನಿಸುತ್ತಾ, ತನ್ನಲ್ಲಿ ನಿಷ್ಮಾಮ ಭಕ್ತಿಯನ್ನಿಟ್ಟಿರುವ ಭಕ್ತರಿಗೆ ಮುಕ್ತಿಯನ್ನೂ ಕೊಡುತ್ತಾನೆ.  ತನ್ನ ಪಟ್ಟಣವನ್ನೇ ಕೊಡುತ್ತಾನೆ, ತನುವನ್ನೇ ಕೊಡುತ್ತಾನೆ, ಜೊತೆಗೆ ಮನವನ್ನೂ ಕೊಟ್ಟುಬಿಡುತ್ತಾನೆ.  ತನುವನ್ನೂ ಮನವನ್ನೂ ಕೊಟ್ಟುಬಿಡುವುದರ ಅರ್ಥವೆಂದರೆ ಮುಕ್ತರಿಗೆ ಮೋಕ್ಷ ಕರುಣಿಸುವುದು ಎಂದಾಗುತ್ತದೆ.  ಭಕ್ತಿಯಲ್ಲಿ ಬಹುವಿಧಗಳಿವೆ ಹಾಗೇ ಮೋಕ್ಷದಲ್ಲೂ ಐದು ವಿಧವಾದ ಮೋಕ್ಷಗಳಿವೆ.  ಭಕ್ತಿಯಲ್ಲಿ ಬಹುವಿಧವಿದೆಯೆಂಬುದನ್ನು ಭಾಗವತದ ತೃತೀಯಸ್ಕಂದದಲ್ಲಿ 

ಭಕ್ತಿಯೋಗೋ ಬಹುವಿಧೋ ಮಾರ್ತೈರ್ಭಾಮಿನಿ ಭಾವ್ಯತೇ |
ಸ್ವಭಾವಗುಣ ಮಾರ್ಗೇಣ ಪುಂಸಾಂ ಭಾವೋ ವಿಭಿದ್ಯತೇ || - ಸಾಧಕರ ಭಾವಕ್ಕೆ ತಕ್ಕಂತೆ ಭಕ್ತಿಯೋಗವು ಅನೇಕ ಪ್ರಕಾರವಾಗಿ ಪ್ರಕಾಶಿಸುತ್ತದೆ.  ಮನುಷ್ಯರ ಮನೋವೃತ್ತಿಗಳ ಮತ್ತು ಸತ್ತ್ವಾದಿಗುಣಗಳ ಭೇದಕ್ಕೆ ಅನುಗುಣವಾಗಿ ಅವರ ಭಾವಗಳಲ್ಲೂ ಅನೇಕ ಪ್ರಕಾರದ ಭೇದಗಳಿರುತ್ತವೆ.  ಅದರಿಂದಾಗಿಯೇ ಭಕ್ತಿಯಲ್ಲಿ ಮಾತ್ರ ವಿವಿಧತೆಯಲ್ಲ, ಭಕ್ತರಲ್ಲೂ ವಿವಿಧ ಭೇದಗಳಿವೆ.  ನಿಜವಾದ ಭಕ್ತರ ಲಕ್ಷಣಗಳು ಹೀಗಿರುತ್ತವೆಯೆಂದು ಭಾಗವತದಲ್ಲಿ ತಿಳಿಸಿದೆ.
ಲಕ್ಷಣಂ ಭಕ್ತಿಯೋಗಸ್ಯ ನಿರ್ಗುಣಸ್ಯ ಹ್ಯುದಾಹೃತಮ್ |
ಅಹೈತುಕ್ಯವ್ಯವಹಿತಾ ಯಾ ಭಕ್ತಿಃ ಪುರುಷೋತ್ತಮೇ || - ಗಂಗೆಯ ಪ್ರವಾಹವು ಅಖಂಡರೂಪವಾಗಿ, ಸಹಜವೇ ಎನ್ನುವಂತೆ ಸಮುದ್ರದೆಡೆಗೆ ಹೇಗೆ ಧಾವಿಸುವುದೋ, ಹಾಗೆ ಭಗವಂತನ ಗುಣಗಳನ್ನು ಕೇಳಿ, ಅನ್ಯವ್ಯಾಪಾರರಹಿತವಾಗಿ ಗಂಗಾಪ್ರವಾಹದಂತೆ ಸ್ವಾಭಾವಿಕವಾಗಿರುವ ಅಂತಃಕರಣ ಸ್ಥಿತಿಯಲ್ಲಿ ಸರ್ವಾಂತರ್ಯಾಮಿ ಹಾಗೂ ಪುರುಷೋತ್ತಮನಾದ ಭಗವಂತನ ಕಡೆಗೆ  ಅನನ್ಯ ಭಾವದಿಂದ ಸೆಳೆಯಲ್ಪಡುವುದೋ ಅದೇ ಉತ್ತಮ ಭಕ್ತಿ ಅಥವಾ ’ನಿರ್ಗುಣ ಭಕ್ತಿ’ಯ ಲಕ್ಷಣ. ನಿರ್ಗುಣ ಭಕ್ತಿಯೆಂದರೆ ಜಗತ್ತೆಲ್ಲವೂ ಪರಮಾತ್ಮನ ಸ್ಥೂಲರೂಪ, ಹಾಗೂ ಜಗತ್ ಸೃಷ್ಟಿಗೆ ಏಕಮೇವ ಕಾರಣ ಎಂದು ತಿಳಿಯುವುದು.  ಬಾಹ್ಯ ಉಪಾಧಿಗಳನ್ನೆಲ್ಲಾ ಬಿಟ್ಟು ಸರ್ವದಾ ಭಗವಂತನ ಸ್ವರೂಪವನ್ನು ಅತ್ಯಧಿಕ ಪ್ರೇಮದಿಂದ ಚಿಂತಿಸುತ್ತ ಇರುವುದು ಎಂಬುದನ್ನು ಸ್ಕಂದಮಹಾಪುರಾಣದಲ್ಲಿ ತಿಳಿಸಲ್ಪಟ್ಟಿದೆ.  ಈ ನಿರ್ಗುಣ ಭಕ್ತಿಯು ಸತ್ವ, ರಜೋ, ತಮೋ ಎಂಬ ತ್ರಿಗುಣಗಳನ್ನೂ ಹೋಗಲಾಡಿಸಿ, ಮುಕ್ತಿಗೆ ತಲುಪಿಸುತ್ತದೆ.

ಅನ್ಯವ್ಯಾಪಾರರಹಿತವಾಗಿ ಭಕ್ತಿಯನ್ನು ಮಾಡುವ ಭಕ್ತನನ್ನು ಕುರಿತು ಭಗವದ್ಗೀತೆಯ ೧೧ನೇ ಅಧ್ಯಾಯದಲ್ಲಿ  ಭಗವಂತ
ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ || - ಅನನ್ಯ ಭಕ್ತಿಯ ಮೂಲಕ ಚತುರ್ಭುಜರೂಪವುಳ್ಳ ನನ್ನನ್ನು ಪ್ರತ್ಯಕ್ಷವಾಗಿ ನೋಡಲು, ತತ್ವದಿಂದ ತಿಳಿಯಲು ಹಾಗೂ ಪ್ರವೇಶಿಸಲು ಶಕ್ತ್ಯವಿದೆಯೆಂದಿದ್ದಾನೆ
ಮತ್ಕರ್ಮ ಕೃನ್ಮತ್ಪರಮೋ ಮದ್ಭಕ್ತಃ ಸಂಗವರ್ಜಿತಃ |
ನಿವೈರಃ ಸರ್ವ ಭೂತೇಷು ಯಃ ಸ ಮಾಮೇತಿ ಪಾಂಡವ || - ಕೇವಲ ನನಗಾಗಿಯೇ ಸಮಸ್ತ ಕರ್ತವ್ಯ, ಕರ್ಮಗಳನ್ನು ಮಾಡುವ, ನನ್ನಲ್ಲಿ ಪರಾಯಣನಾದ, ನನ್ನ ಭಕ್ತನಾದ, ಆಸಕ್ತಿರಹಿತನಾದ ಮತ್ತು ಸರ್ವ ಪ್ರಾಣಿಗಳಲ್ಲಿ ವೈರಭಾವರಹಿತನಾದ ಅನನ್ಯ ಭಕ್ತನು ನನ್ನನ್ನೇ ಹೊಂದುತ್ತಾನೆ ಎಂದಿದ್ದಾನೆ.

ಮುಕ್ತಿಯಲ್ಲಿಯೂ ಐದು ವಿಧ ಮುಕ್ತಿಗಳಿವೆಯೆಂದು ಭಾಗವತ ತೃತೀಯ ಸ್ಕಂದದಲ್ಲಿ ತಿಳಿಸಿದೆ.
ಸಾಲೋಕ್ಯಸಾರ್ಷ್ಟಿ ಸಾಮೀಪ್ಯ ಸಾರೂಪ್ಯೈಕತ್ವಮಪ್ಯುತ |
ದೀಯಮಾನಂ ನ ಗೃಹ್ಣನ್ತಿ ವಿನಾ ಮತ್ಸೇವನಂ ಜನಾಃ || - ಐದು ವಿಧ ಮುಕ್ತಿಗಳೆಂದರೆ ಸಾಲೋಕ್ಯ ಸಾರ್ಷ್ಟಿ, ಸಾಮೀಪ್ಯ, ಸಾರೂಪ್ಯ ಮತ್ತು ಸಾಯುಜ್ಯ.  ಸಾಲೋಕ್ಯವೆಂದರೆ ಭಗವಂತನ ಲೋಕದಲ್ಲಿಯೇ  ಅಂದರೆ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ನಿವಾಸಮಾಡುವುದು.  ಸಾರ್ಷ್ಟಿಯೆಂದರೆ ಭಗವಂತನನೊಡನೆ ಸಮಾನವಾದ ಐಶ್ವರ್ಯವನ್ನು ಹೊಂದುವುದು.  ಸಾಮೀಪ್ಯವೆಂದರೆ ಸದಾ ಭಗವಂತನ ಬಳಿಯಲ್ಲಿ, ಅಂದರೆ ವಿಷ್ಣುಲೋಕಗಳೆನಿಸಿರುವ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳ ಸಮೀಪದಲ್ಲಿ ಇರುವುದು.  ಸಾರೂಪ್ಯವೆಂದರೆ ಭಗವಂತನ ರೂಪದಂತೆಯೇ ರೂಪವನ್ನು ಹೊಂದುವುದು, ಅಂದರೆ ಭಗವಂತನಂತೆಯೇ ನಾಲ್ಕು ತೋಳುಗಳನ್ನೂ, ಕಿರೀಟಾದಿ ಆಭರಣಗಳನ್ನೂ ಧರಿಸಿ ವಿಮಾನಗಳಲ್ಲಿ ವಿಹರಿಸುವಂತಹದು.  ಸಾಯುಜ್ಯವೆಂದರೆ ಭಗವಂತನ ತನುಮನಗಳಲ್ಲೇ ವಾಸಿಸುವುದು.  ಭಗವಂತ ತನ್ನ ಶರೀರ ಹಾಗೂ ಮನಸ್ಸುಗಳನ್ನು ಕೊಡುತ್ತಾನೆಂದರೆ, ಮುಕ್ತರು ಭಗವಂತನ ಶರೀರ ಮನಸ್ಸುಗಳನ್ನೇ ಉಪಯೋಗಿಸಿಕೊಂಡು ತಮ್ಮ ಇಚ್ಛಾನುಸಾರ ಚಟುವಟಿಕೆಗಳನ್ನು ಮಾಡುವುದೆಂದರ್ಥವಾಗುತ್ತದೆ.  ಅಂದರೆ ಇಲ್ಲಿಯೂ ಭಗವಂತನ ಅಧೀನವೇ ಇರುತ್ತದೆ, ಸ್ವತಂತ್ರತೆಯಲ್ಲ. ಮುಕ್ತರಾದರೂ ಅವರ ಇಚ್ಛೆ ಹರಿಯ ಇಚ್ಛಾನುಸಾರವೇ ಆಗಿರುತ್ತದೆ ಎಂದರ್ಥವಾಗುತ್ತದೆ.

ಮೋಕ್ಷಕ್ಕೆ ಅಂತರ್ಯಾಮಿಯಾಗಿ ಮಾಡುವ ಅಂತರಂಗ ಸಾಧನೆಗೆ ಭಕ್ತಿಯೊಂದೇ ಪ್ರಧಾನವಾಗಿರುವುದು.  "ಮನಸಾ ಧ್ಯಾಯನ್ ವಿಷ್ಣುಂ" ಎಂಬ ಒಂದೇ ಮಾರ್ಗ ಹಾಗೂ ಗುರಿಯಾಗಬೇಕು.  ಮುಕ್ತಿಗಳಲ್ಲಿ "ಸಾಯುಜ್ಯ" ಮುಕ್ತಿಯೇ ಶ್ರೇಷ್ಠವಾದದ್ದು.   ಸಾಯುಜ್ಯ ಮುಕ್ತಿಗೆ ಯೋಗ್ಯರಾದ ಭಕ್ತರು ಸಾಯುಜ್ಯವನ್ನೂ ಬಯಸಿರುವುದಿಲ್ಲ.  ಅವರಿಗೆ ಶ್ರೀಹರಿಯ ತನುಮನಗಳ ಆಶ್ರಯ ಬೇಕಾಗಿರುತ್ತದಷ್ಟೆ.  ಬೇರೇನೂ ಅಲ್ಲ.  ಭಗವಂತ ಪ್ರೀತಿಯಿಂದ ಕೊಟ್ಟ ಸಾಯುಜ್ಯವನ್ನು ಅವರು ಶ್ರೀಹರಿಯ ಆಜ್ಞೆಯೆಂದು ಮಾತ್ರ ಸ್ವೀಕರಿಸುತ್ತಾರೆ, ಬೇರಾವ ಕಾರಣಕ್ಕೂ ಅಲ್ಲ.

ಶ್ರೀ ವಾದಿರಾಜರು ತಮ್ಮ ವೈಕುಂಠವರ್ಣನೆಯಲ್ಲಿ " ಸಾಯುಜ್ಯ ಸಾಲೋಕ್ಯ ಸಾಮೀಪ್ಯ ಮತ್ತು ಸಾರೂಪ್ಯವೆಂದು ನಾಲ್ಕು ವಿಧ ಮುಕ್ತಿಗಳನ್ನು  ಉಲ್ಲೇಖಿಸಿದ್ದಾರೆ. ಸಾಯುಜ್ಯ ಮುಕ್ತಿಯನ್ನು "ಹರಿಯಂಗವಾಶ್ರೈಸಿ ಮುಕ್ತಿಯಲಿಹರಾಗಿ ಆ ಪಿರಿಯಸುರರೆ ಸಾಯುಜ್ಯ ಮೋಕ್ಷಕರು" ಎಂದಿದ್ದಾರೆ.  ಸಾಲೋಕ್ಯ ಮುಕ್ತಿಯನ್ನು "ಸಾಲೋಕ್ಯ ಹರಿಯ ಲೋಕದೊಳಗೆ ತುಂಬಿಪ್ಪುದು" ಎಂದಿದ್ದಾರೆ.   ಸಾಮೀಪ್ಯ ಮುಕ್ತಿಯನ್ನು  "ಪಾಲಸಾಗರದಲ್ಲಿ ಸುಖಿಸುವ ಜೀವರ ಸಾಲಿಗೆ ಸಾಮೀಪ್ಯ ಮುಕ್ತಿ ಕಾಣಿರೋ" ಎಂದಿದ್ದಾರೆ.    ಸಾಯುಜ್ಯ, ಸಾಮೀಪ್ಯ ಮತ್ತು ಸಾಲೋಕ್ಯ ಮುಕ್ತಿಯನ್ನು ಹೊಂದಿದವರಿಗೂ ಸಾರೂಪ್ಯವೆಂಬುದು ಇದ್ದೇ ಇರುತದೆಂಬುದನ್ನು
ಮೂರು ಶಾಕವ ಮಾಡಿ ಲವಣವ ಕೂಡಿದರೂ
ಮೂರು ಶಾಕವೆಂದು ಕರೆಯರೈಸೆ
ಬೇರೆ ಬೇರೆ ಬಡಿಸಿದರೂ ಲವಣವೆನಿಪುದು ಈ-
ಪರಿಯಲ್ಲಿ ಸಾರೂಪ್ಯದ ಮುಕ್ತರಿಗೂ || - ಮೂರು ತರಹದ ಪಲ್ಯಗಳನ್ನು ಮಾಡಿ, ಅವುಗಳನ್ನು ಉಪ್ಪಿನೊಡನೆ ಸೇರಿಸಿದರೂ ಕೂಡ, ಮೂರು ತರಹದ ಪಲ್ಯಗಳೆಂದೇ ಕರೆಯಲ್ಪಡುತ್ತವೆ.   ಅದರಲ್ಲಿ ಉಪ್ಪು ಬೇರೆಯೆಂದು ವ್ಯವಹರಿಸುವುದಿಲ್ಲ.  ಆದರೆ ಎಲೆಯ ತುದಿಯಲ್ಲಿ ಬೇರೆಯಾಗಿಯೇ ಬಡಿಸಿದ ಉಪ್ಪನ್ನು ಮಾತ್ರ ಉಪ್ಪು ಎಂದೇ ವ್ಯವಹರಿಸುತ್ತಾರೆ.  ಸಾಮೀಪ್ಯ ಮತ್ತು ಸಾಯುಜ್ಯ ಮುಕ್ತಿಗಳು ವಿಶೇಷವಾದವು.  ಅವುಗಳಿಲ್ಲದ ಬೇರೆ ಎಲ್ಲಾ ಮುಕ್ತರಿಗೂ ಸಾರೂಪ್ಯಮುಕ್ತಿಯು ಇದ್ದೇ ಇರುತ್ತದೆ.

ಸತ್ಯಲೋಕದವರೆಗಿನ ಲೋಕಗಳಲ್ಲಿ ವಾಸಿಸುವವರು ಸಾರೂಪ್ಯ ಮುಕ್ತರು.  ಭಗವಂತನ ಮನೆಗಳಾದ ಧಾಮತ್ರಯಗಳ ಆಸುಪಾಸಿನಲ್ಲಿ ವಾಸಿಸುವವರು ಸಾಮೀಪ್ಯ ಮುಕ್ತರು.  ಶ್ರೀಹರಿಯ ಮನೆಗಳಾದ ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳಲ್ಲಿ ವಾಸಿಸುವವರು ಸಾಲೋಕ್ಯ ಮುಕ್ತರು ಮತ್ತು ಪರಮಾತ್ಮನ ತನುಮನಗಳಲ್ಲಿ ವಾಸಿಸುವವರು ಸಾಯುಜ್ಯ ಮುಕ್ತರು.  ಭಗವಂತ ಹೀಗೆ ತನ್ನನ್ನೇ ಸದಾ ಸ್ಮರಿಸುವ, ಸೇವಿಸುವ ಭಕ್ತರಿಗೆ ತನ್ನ ತನುಮನಗಳೆರಡನ್ನೂ ಕೊಟ್ಟು ಮುಕ್ತಿಯನ್ನು ಕರುಣಿಸುವ ಕರುಣಾಮಯಿಯು.

ಅನವರತ ನೆನೆವವರ - ಅನವರತವೂ ನೆನೆವವರೇ ನಿಜವಾದ ಭಕ್ತರು. ಧ್ಯಾನದಿಂದಲೇ ಅವರು ಶುದ್ಧಿಯಾಗುವರು ಮತ್ತು ಎಲ್ಲವನ್ನೂ ಪಡೆಯುವರು.  ಸ್ಕಂದಮಹಾಪುರಾಣದಲ್ಲಿ
ಧ್ಯಾನೇನ ಸರ್ವಮಾಪ್ನೋತಿ ಧ್ಯಾನೇ ನಾಪ್ನೋತೊ ಶುದ್ಧತಾಂ |
ಧ್ಯಾನೇನ ಪರಮಂ ಬ್ರಹ್ಮ ಮೂರ್ತೌ ಯೋಗಸ್ತು ಧ್ಯಾನಜಃ || - ಪರಬ್ರಹ್ಮ ಪ್ರಾಪ್ತಿಯೂ, ಸಾಕ್ಷಾತ್ಕಾರವೂ ಉತ್ಕಟ ಹಾಗೂ ಅನವರತ ಧ್ಯಾನದಿಂದಲೇ ಸಾಧ್ಯವೆಂದು ತಿಳಿಸಲ್ಪಟ್ಟಿದೆ.
ಭಗವದ್ಗೀತೆಯಲ್ಲಿ ಭಗವಂತ ಅರ್ಜುನನಿಗೆ
ಮಯ್ಯೇವ ಮನ ಆಧಸ್ಸ್ವಮಯಿ ಬುದ್ಧಿಂ ನಿವೇಶಯ |
ನಿವಸಿಷ್ಯಸಿ ಮಯ್ಯೇವ ಅತ ಊರ್ಧ್ವಂ ನ ಸಂಶಯಃ || - ನನ್ನಲ್ಲೇ ಮನಸ್ಸು ಹಾಗೂ ಬುದ್ಧಿಯನ್ನು ತೊಡಗಿಸಿದರೆ ಯಾವ ಸಂಶಯವೂ ಇಲ್ಲದೆ ನೀನು ನನ್ನಲ್ಲೇ ನೆಲೆಸುವೆ ಎಂದಿದ್ದಾನೆ.  ಮನಸ್ಸು ಮತ್ತು ಬುದ್ಧಿ ಎರಡನ್ನೂ ಭಗವಂತನ ಪಾದದಲ್ಲಿ ನೆಲೆಗೊಳಿಸಲು, ಧ್ಯಾನದ ಮೂಲಕ ಅನವರತ ನೆನೆವುದಲ್ಲದೆ ಬೇರೆ ಉಪಾಯವಿಲ್ಲವೇ ಇಲ್ಲ.
"ನಿನ್ನ ಧ್ಯಾನವನು ಕೊಡು ಎನ್ನ ಧನ್ಯನ ಮಾಡು" ಎಂದು ಪುರಂದರ ದಾಸರು ಹೇಳಿದ್ದಾರೆ.  "ನಿನ್ನ ಧ್ಯಾನದ ಶಕ್ತಿಯ ಕೊಡು, ಅನ್ಯರಲಿ ವಿರಕ್ತಿಯ ಕೊಡು..... ತುದಿಯಲಿ ಎನಗೆ ಮುಕ್ತಿ ಕೊಡು" ಎಂದು ಶ್ರೀವಾದಿರಾಜರು ಕೂಡ ತಿಳಿಸಿದ್ದಾರೆ.

ಅನಂತಾಸನವೆ ಮೊದಲಾದಾಲಯ -   ಧಾಮತ್ರಯಗಳೆಂದೇ ಪ್ರಸಿದ್ಧಿಗೊಂಡಿರುವುದು ಅನಂತಾಸನ, ಶ್ವೇತದ್ವೀಪ ಮತ್ತು ವೈಕುಂಠಗಳು.  ಈ ಧಾಮತ್ರಯಗಳು ಶ್ರೀಹರಿಯ ಸಾಕ್ಷಾತ್ ನಿವಾಸಗಳು.  ವಿಷ್ಣುರಹಸ್ಯ ಹಾಗೂ ಇತರ ಪುರಾಣಗಳಲ್ಲಿ ವೈಕುಂಠ ಲೋಕದಲ್ಲಿ, ವೈಕುಂಠವೆಂದೇ ಕರೆಯಲ್ಪಡುವ ವೈಕುಂಠನಾಮಕ ಶ್ರೀಹರಿಯು ವಿಹರಿಸುವುದೇ ವೈಕುಂಠನಗರಿಯು ಎಂದಿದೆ.
ಭಗವದ್ಗೀತೆಯ ೮ನೇ ಅಧ್ಯಾಯದಲ್ಲಿ ಭಗವಂತ
ಅವ್ಯಕ್ತೋಕ್ಷರ ಇತ್ಯುಕ್ತಸ್ತಮಾಹುಃ ಪರಮಾ ಗತಿಮ್ |
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ || - ಅದನ್ನು ಅವ್ಯಕ್ತ, ಅಕ್ಷರ ಎಂದು ಹೇಳುತ್ತಾರೆ ಮತ್ತು ಶ್ರೇಷ್ಠಗತಿಯೆಂದೂ ತಿಳಿಸುತ್ತಾರೆ.  ಆ ಸನಾತನ ಅವ್ಯಕ್ತ ಭಾವವನ್ನು ಪಡೆದುಕೊಂಡ ಬಳಿಕ ಮನುಷ್ಯನು ಮರಳಿ ಹುಟ್ಟುವುದಿಲ್ಲ, ಅದು ನನ್ನ ಸರ್ವಶ್ರೇಷ್ಠ ಸ್ಥಾನವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ತಮ್ಮ ವೈಕುಂಠ ವರ್ಣನೆಯಲ್ಲಿ "ಸಾಕ್ಷಾನ್ನಾರಾಯಣನಿಪ್ಪ ವೈಕುಂಠ"ವೆಂದಿದ್ದಾರೆ.   "ಅರ್ಕಕೋಟಿಗಳಂತೆ ವೈಕುಂಠಲೋಕ ದಶ ದಿಕ್ಕಿನೊಳಗೆ ಬೆಳಗುವುದು"  -  ವೈಕುಂಠಲೋಕವನ್ನು ಮಾತ್ರ ಲಕ್ಷ್ಮೀದೇವಿಯ ಕಾಂತಿಯು ಸಾಕ್ಷಾತ್ತಾಗೆ ಪ್ರಕಾಶಗೊಳಿಸುತ್ತದೆ ಎಂದಿದ್ದಾರೆ.
ಭಗವದ್ಗೀತೆಯಲ್ಲಿ ಭಗವಂತ ಸ್ವಯಂ
ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ |
ಯದ್ಗತ್ವಾನ ನಿವರ್ತಂತೇ ತದ್ಧಾಮ ಪರಮಂ ಮಮ || - ಆ ಸ್ವಯಂ ಪ್ರಕಾಶಿತ ಪರಮಪದವನ್ನು ಸೂರ್ಯ ಚಂದ್ರರಾಗಲೀ, ಅಗ್ನಿಯಾಗಲೀ ಪ್ರಕಾಶಿಸಲಾರರು.  ಆ ಪರಮಪದವನ್ನು ಪಡೆದ ಮನುಷ್ಯ ಮರಳಿ ಸಂಸಾರಕ್ಕೆ ಬರುವುದಿಲ್ಲ.  ಅದೇ ನನ್ನ ಪರಮಧಾಮವಾಗಿದೆ ಎಂದಿದ್ದಾನೆ.
ಶ್ರೀ ವಾದಿರಾಜರು ವೈಕುಂಠವರ್ಣನೆಯಲ್ಲಿ ಮುಂದುವರೆಯುತ್ತಾ "ಶಿರಿದೇವಿ ತಾನೆ ಮುರಹರನ ಪಟ್ಟಣದೊಳು | ಪರಿಪರಿಯ ಮನೆಯ ರೂಪದಲ್ಲಿ | ಮಿರಮಿರನೆ ಮಿಂಚುವಳು ಹಚ್ಚಪ್ರಕೃತಿಯಿಂದ | ವಿರಚಿತಗೃಹಗಳೊಪ್ಪಿಹವು || - ಮುರಹರನ ಪಟ್ಟಣದಲ್ಲಿ ಶಿರಿದೇವಿಯಾದ ಶ್ರೀಮಹಾಲಕ್ಷ್ಮಿಯೇ ಸ್ವಯಂ ಪರಿಪರಿಯ, ನಾನಾವಿಧದ ಮನೆಯ ರೂಪಗಳಲ್ಲಿ ಪ್ರಕಾಶಿಸುತ್ತಾಳೆ ಎಂದಿದ್ದಾರೆ.  ಇಂತಹ ಪರಮ ಪವಿತ್ರವಾದ ಮತ್ತು ಲಕ್ಷ್ಮೀದೇವಿಯೇ ಸ್ವಯಂ ರೂಪದಲ್ಲಿರುವ ತನ್ನ ತ್ರಿಧಾಮಗಳನ್ನೇ ಭಗವಂತ ಸಾಲೋಕ್ಯ ಮುಕ್ತರಿಗೆ ಕೊಟ್ಟುಬಿಡುತ್ತಾನೆ.  ಇದು ಅವನ ಪರಮಕಾರುಣ್ಯವಲ್ಲದೇ ಬೇರೇನೂ ಅಲ್ಲ.

ಅಣುಗನಂದದಲವರ ವಶನಾಗುವ -  ಅನುಗನೆಂದರೆ ಸಂಸ್ಕೃತದಲ್ಲಿ ಸಹಚರ, ಸೇವಕ, ಅನುಚರ, ಹಿಂಬಾಲಿಸುವವ ಎಂದರ್ಥ.  ಲೌಕಿಕ ಪ್ರಪಂಚದ ಎಲ್ಲಾ ಸಂಬಂಧಗಳಲ್ಲೂ ಒಬ್ಬರಿಗೊಬ್ಬರು ತಮ್ಮನ್ನು ಅರ್ಪಿಸಿಕೊಂಡಾಗ ಅಲ್ಲಿ ಸ್ವಾರ್ಥದ ಲೇಪವಿದ್ದೇ ಇರುತ್ತದೆ.  ಆದರೆ ಪರಮಾತ್ಮನಿಗೆ ಪರಮ ಭಕ್ತರು ತಮ್ಮನ್ನೇ ಅರ್ಪಿಸಿಕೊಂಡಾಗ ಅಲ್ಲಿ ಎಲ್ಲವೂ ಮುಕ್ತವಾಗಿರುತ್ತದೆ.  ಭಗವಂತ ತನ್ನ ತನು ಮನ ಧಾಮಗಳೆಲ್ಲವನ್ನೂ ಭಕ್ತರಿಗೆ ಕೊಟ್ಟಾಗಲೂ ಅದರಿಂದ ಅವನಿಗೆ ಯಾವ ಲಾಭವೂ ಇಲ್ಲ.  ತನ್ನದೆಲ್ಲವನ್ನೂ ಕೊಟ್ಟು, ತಾನೂ ಅನುಗನಂತೆ ಭಕ್ತರನ್ನು ಸೇವಿಸುವ.  ಪುಟ್ಟ ಮಗು ತನ್ನ ತಂದೆಯನ್ನೇ ಅನುಸರಿಸುತ್ತಾ ಹಿಂದೆ ಮುಂದೆ ತಿರುಗುವಂತೆ ಭಗವಂತ ತನ್ನ ಭಕ್ತರ ವಶನಾಗಿಬಿಡುವನು.  ಇದೇ ಆ ಪರಮಪುರುಷನ ಅತಿಶಯವಾದ ಕಾರುಣ್ಯವು  ಹಾಗೂ ಮಹಾಮಹಿಮೆಯು ಆಗಿರುತ್ತದೆ.

ಶ್ರೀ ಜಗನ್ನಾಥದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ
ಏನು ಕೊಟ್ಟರೂ ಕೊಡೋ ಶ್ರೀನಿವಾಸನೆ ನಿನ್ನ-
ಧೀನದವನಯ್ಯ ಎಂದೆಂದು | ಎಂದೆಂದು ಸುಖದುಃಖ-
ಮಾನಾದಿಗಳಿಗೆ ಪ್ರಭು ನೀನು || - ಶ್ರೀನಿವಾಸನೇ ನೀನು ಏನು ಕೊಡುತ್ತೀಯೋ ಕೊಡು, ನಿನ್ನ ಇಚ್ಛೆಗೆ ಬಂದದ್ದನ್ನು ಕೊಡು.  ನಾನು ಎಂದೆಂದಿಗೂ, ಯಾವ ಕಾಲಕ್ಕೂ (ಮುಕ್ತಿಯಲ್ಲೂ) ನಿನ್ನ ದಾಸನು.  ನನ್ನ ಸುಖ-ದುಃಖ ಮಾನಾಪಮಾನಾದಿ ದ್ವಂದ್ವಗಳಿಗೆ ನೀನೇ ಪ್ರಭು, ನೀನೇ ಸ್ವತಂತ್ರನು.  ನಾನು ನಿನ್ನ ಅಧೀನನು ಎಂದಿದ್ದಾರೆ.

ನಿತ್ಯ ಬುದ್ಧನು ನಾನು ನಿತ್ಯ ಮುಕ್ತನು ನೀನು
ಭೃತ್ಯನು ನಾನು ಪ್ರಭು ನೀನು | ಪ್ರಭು ನೀನು ಮೂರ್ಲೋಕ-
ವ್ಯಾಪ್ತನು ನೀನು ಅಣು ನಾನು || - ನಾನು ನಿತ್ಯ ಪರಾಧೀನನು, ನಿತ್ಯ ಸಂಸಾರಿಯು ಮತ್ತು ನಿನ್ನ ಸೇವಕನು.  ನೀನು ನಿತ್ಯ ಸ್ವತಂತ್ರನು, ಆಳುವ ಪ್ರಭು,  ಮೂರ್ಲೋಕ ವ್ಯಾಪ್ತನು.  ಆದರೆ ನಾನಾದರೋ ಅಣು ಮಾತ್ರ ಸ್ವರೂಪನು ಎಂದಿದ್ದಾರೆ.  ದುಃಖ ವಿಮೋಚನೆಯೇ ಮುಕ್ತನೆಂಬ ನಾಮಕ್ಕೆ ಕಾರಣವಾದರೆ, ಸದಾ ಶ್ರೀಹರಿಯ ಅಧೀನನು ಎಂಬುದೇ ಬದ್ಧನೆಂಬ ನಾಮಕ್ಕೆ ಕಾರಣವಾಗುತ್ತದೆ.

ಡಿವಿಜಿಯವರು ಕಗ್ಗದಲ್ಲಿ "ಮುಕ್ತಿಸುಖವಾಂತರಿಕವದು ನಿರವಧಿಸುಖ" - ಮುಕ್ತಿಸುಖವೆನ್ನುವುದು ಬಾಹ್ಯವಲ್ಲ,  ಆಂತರಿಕ.  ಪ್ರತೀ ಜೀವಿಯೂ ತನ್ನ ದೃಷ್ಟಿಯನ್ನು ತನ್ನೊಳಗೆ ತಿರುಗಿಸಿಕೊಂಡು ಅಲ್ಲಿ ಆಗುವ ಬ್ರಹ್ಮಾನಂದವನ್ನು ಅನುಭವಿಸಬೇಕು, ಅದು ನಿರವಧಿಸುಖ ಎಂದಿದ್ದಾರೆ.
ನೆನೆನೆನೆದು ಗಹನವನು, ಜೀವನರಹಸ್ಯವನು
ಮನವ ಬಳಲಿಸಿ ಸೋಲಿಸಿರುವ ತತ್ತ್ವವನು |
ಮನನದೇಕಾಂತದಲಿ ಮೌನದ ಧ್ಯಾನದಲಿ
ಮಣಿಮಣಿದು ಕೈಮುಗಿಯೊ - ಮಂಕುತಿಮ್ಮ || - ವಿಶ್ವಕ್ಕೆಲ್ಲಾ ಆದಿಮೂಲವಾಗಿರುವ ಬ್ರಹ್ಮ ವಸ್ತುವನ್ನು ಯಾವಾಗಲೂ ಜ್ಞಾಪಿಸಿಕೊಳ್ಳುತ್ತಿರು.  ಏಕಾಂತದಲ್ಲಿ ಮೌನವಾಗಿ ಕುಳಿತು ತದೇಕ ಚಿತ್ತನಾಗಿ ಧ್ಯಾನಿಸು.  ಧ್ಯಾನಿಸುತ್ತಾ ಪುನಃ ಪುನಃ ಸಾಷ್ಟಾಂಗ ನಮಸ್ಕಾರ ಮಾಡು ಎಂದಿದ್ದಾರೆ.

ಚಿತ್ರಕೃಪೆ : ಅಂತರ್ಜಾಲ

No comments: