Wednesday, January 15, 2014

ಕರುಣಾ ಸಂಧಿ - ೧೪ ನೇ ಪದ್ಯ

ಬಾಲಕನ ಕಲಭಾಷೆ ಜನನಿಯು
ಕೇಳಿ ಸುಖಪಡುವಂತೆ ಲಕುಮೀ
ಲೋಲ ಭಕುತರು ಮಾಡುತಿಹ 
ಸಂಸ್ತುತಿಗೆ ಹಿಗ್ಗುವನು |
ತಾಳ ತನ್ನವರಲ್ಲಿ ಮಾಡುವ
ಹೇಳನವ ಹೆದ್ದೈವ ವಿದುರನ
ಆಲಯದಿ ಪಾಲುಂಡು ಕುರುಪನ 
ಮಾನವನೆ ಕೊಂಡ ||೧೪||
ಪ್ರತಿಪದಾರ್ಥ : ಬಾಲಕನ ಕಲಭಾಷೆ - ಮುದ್ದು ಮಗುವಿನ ಅಸ್ಪಷ್ಟ ತೊದಲು ನುಡಿಗಳನ್ನು, ಜನನಿಯು ಕೇಳಿ ಸುಖ ಪಡುವಂತೆ - ತಾಯಿಯು ಮಗುವಿನ ಇಂಪಾದ ತೊದಲು ನುಡಿಗಳನ್ನು ಕೇಳಿ ಆನಂದದಿಂದ ಸುಖ ಪಡುವಂತೆ, ಲಕುಮೀ ಲೋಲ - ಲಕ್ಷ್ಮೀಪತಿಯಾದ ಶ್ರೀಹರಿಯು, ಭಕುತರು ಮಾಡುತಿಹ - ತನ್ನ ಭಕ್ತರು ತನ್ನನ್ನು ಆರಾಧಿಸುತ್ತಾ ತನ್ನ ಗುಣಗಳನ್ನು, ಸ್ತುತಿಸುವಂತೆ - ಹೊಗಳಿ ಸ್ತುತಿಸುವುದನ್ನು ಕೇಳಿ, ಹಿಗ್ಗುವನು - ಅತ್ಯಂತ ಪ್ರಸನ್ನನಾಗುವನು, ತಾಳ ತನ್ನವರಲ್ಲಿ ಮಾಡುವ ಹೇಳನವ - ತನ್ನ ಭಕ್ತರ ಬಗ್ಗೆ ಬೇರೆಯವರು ಮಾಡುವ ಅವಮಾನವನ್ನು ನಿಂದನೆಯನ್ನು ಭಗವಂತನು ಸಹಿಸಲಾರನು, ಹೆದ್ದೈವ - ಎಲ್ಲರಿಗೂ ಹಿಯಿಯವನಾದ ಸರ್ವೋತ್ತಮನಾದ ಭಗವಂತನು, ವಿದುರನ ಆಲಯದಿ - ವಿದುರನೆಂಬ ಪ್ರೀತಿಯ ಭಕ್ತನ ಮನೆಯಲ್ಲಿ, ಪಾಲುಂಡು - ಹಾಲು ಕುಡಿದು ಆತಿಥ್ಯ ಸ್ವೀಕರಿಸಿ, ಕುರುಪನ - ಕುರು ಕುಲಾಧಿಪತಿಯಾದ ದುರ್ಯೋಧನನ, ಮಾನವನೆ ಕೊಂಡ - ದುರ್ಯೋಧನನ ಆಹ್ವಾನ ತಿರಸ್ಕರಿಸಿ ಅವನ ಅವಮಾನಕ್ಕೆ ಕಾರಣನಾಗಿ ಕೊನೆಗೆ ಅವನ ಸರ್ವನಾಶಕ್ಕೂ ಕಾರಣನಾದನು.

ಪುಟ್ಟ ಮಗುವಿನ ತಪ್ಪು / ತೊದಲು ಮಾತು ಕೇಳಿ ತಾಯಿ ಆನಂದ ಪಡುವಂತೆ, ಭಗವಂತ ಭಕ್ತರ ತಪ್ಪುಗಳನ್ನೆಲ್ಲಾ ಕ್ಷಮಿಸಿ, ಭಕ್ತರು ತೋರುವ ಅಲ್ಪ ಭಕ್ತಿಗೆ ಕರುಣೆ ತೋರಿಸುತ್ತಾನೆ.  ’ಬಾಲ ಕ’ ಎಂದರೆ ಕ - ಬ್ರಹ್ಮದೇವ, ಬಾಲ - ಪರಮಾತ್ಮನ ಮಗ, ಸತತವಾಗಿ ಹಿಂಬಾಲಿಸುವವನು.  ಬ್ರಹ್ಮದೇವ ಭಗವಂತನ ಮಗ ಹಾಗೂ ಸತತ ಹಿಂಬಾಲಕ.  ಬ್ರಹ್ಮ ದೇವರು ಪುಟ್ಟ ಬಾಲಕ, ಅವರು ತೊದಲುತ್ತಾರೆ, ಅವರ ಈ ತೊದಲು ನುಡಿಯೇ ಜನನಿಯಾದ ಲಕ್ಷ್ಮೀದೇವಿಗೂ ಜನನಿಯಂತಿರುವ ಭಗವಂತನಿಗೂ  ಅತೀ ಪ್ರಿಯವಾಗುವುದು.  ಭಗವಂತ ಲಕ್ಷ್ಮೀದೇವಿಗೆ ಗರ್ಭಧಾರಣೆ ಮಾಡಿಸಿ, ಬ್ರಹ್ಮಾಂಡವನ್ನು ಸೃಷ್ಟಿಸುತ್ತಾನೆ.  ಜೊತೆಗೇ ತಾನು ನೇರವಾಗಿಯೂ ಮತ್ತು ತನ್ನ ಅಂಗಾಂಗಗಳಿಂದಲೂ ಸೃಷ್ಟಿಸುತ್ತಾನೆ,  ಆದ್ದರಿಂದ ಅವನು ಜನನಿಯೂ ಹೌದು ಜನಕನೂ ಹೌದು.  ಅಚಿಂತ್ಯಾದ್ಭುತನಾದ ಪರಮಾತ್ಮ ಜೀವಿಗಳಿಗೆ ಜನನ ಕೊಡುವುದು ಸಾಧನೆಗಾಗಿ, ಸ್ಥಿತಿ ಕೊಡುವುದು ಸಾಧನೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ಸಾವನ್ನು ಕೊಡುವುದು ಝರ್ಝರಿತವಾದ ದೇಹ ಕಳಚಿ ಹೊಸ ದೇಹವನ್ನು ಕೊಡುವುದಕ್ಕೋಸ್ಕರ.  ಹೀಗೆ ಸಾಧನೆಯನ್ನು ಸತತವಾಗಿ ಮುಂದುವರೆಯುವಂತೆ ಮಾಡುವವನು, ಜನನಿಯೂ ಜನಕನೂ ಆದ ಭಗವಂತನು.  ಸಾಧನೆಯಿಲ್ಲದೇ ಫಲವಿಲ್ಲ.  ಜೀವಿಗಳು ಏನನ್ನು ಮಾಡಿದರೂ, ಮಾಡುವಾಗ ಲಕ್ಷ್ಮೀನಾರಾಯಣ ’ಪ್ರೇರಣಯ’ ಎಂದು ಹೇಳಿಕೊಂಡು ಮಾಡಬೇಕು.  "ನ ಹಂ ಕರ್ತಾ ಹರಿಃ ಕರ್ತ" ಎನ್ನುವ ಅರಿವು ಸದಾ ಜಾಗೃತವಾಗಿರಬೇಕು. 

ಪ್ರಳಯ ಕಾಲದಲ್ಲಿ ವಟಪತ್ರಶಾಯಿಯಾಗಿ ಮಗುವಾಗಿ ಮಲಗಿದಾಗ ಲಕ್ಷ್ಮೀದೇವಿ ತಾಯಿಯಾಗಿಯೂ ಲಾಲಿಸುತ್ತಾಳೆ.  ಹಾಗೇ ಸೃಷ್ಟಿ ಕಾರ್ಯ ಮಾಡೆಂದು ವೇದಗಳಿಂದ ಸ್ತುತಿಸುತ್ತಾ, ಜೀವರುಗಳಿಗೆ ಮೋಕ್ಷ ಕೊಡಲೇಳೆಂದು ಎಬ್ಬಿಸುವಳು.   ಬ್ರಹ್ಮ ದೇವನ ತೊದಲು ನುಡಿಯು ನಿಜ ಅರ್ಥದಲ್ಲಿ ಭಗವಂತನ ಸಂಸ್ತುತಿಯೇ ಆಗಿದೆ.  ಹಾಗೆ ನಾವು ಕೂಡ ಪರಮಾತ್ಮನ ಸ್ಮರಣೆ ಮಾಡುವಾಗ ನಮ್ಮ ತನು ಮನವೆಲ್ಲವೂ ಅದೇ ಭಾವದಲ್ಲಿ ಲೀನವಾಗಿಟ್ಟುಕೊಂಡು, ನಮ್ಮ ಪ್ರಾರ್ಥನೆಯನ್ನು ಸಂಸ್ತುತಿಯಾಗಿಸಬೇಕು.   ಭಕ್ತಿಯಿಲ್ಲದೇ ಮಾಡುವ ಆರಾಧನೆಯಿಂದಾಗಿ ಯಾವ ಫಲವೂ ಸಿಕ್ಕುವುದಿಲ್ಲ.  ಸಂಸ್ತುತಿ ಎಂದರೆ, ಭಕ್ತಿಯಿಂದ ಆರಾಧಿಸುವುದು.   ಭಗವಂತನ ಮುಂದೆ ಕುಳಿತಾಗ ಎಂದಿಗೂ ದುಖಃದಿಂದ ಕಣ್ಣೀರು ಸುರಿಸಬಾರದು.  ಭಗವಂತನ ಪಾದದಲ್ಲಿ ಮನಸ್ಸನ್ನು ನೆಲೆಗೊಳಿಸಿ, ಒಳಗಿನಿಂದ ಬರುವ ಸಾತ್ವಿಕ ತರಂಗಗಳಿಂದ, ಆನಂದ ಭಾಷ್ಪ ಸುರಿಸಬೇಕು.  ಭಗವಂತನ ಸ್ಮರಣೆ ಮಾಡುವಾಗಲೂ, ಸ್ತುತಿಸುವಾಗಲೂ ಶುದ್ಧವಾಗಿಯೂ, ಸ್ಪಷ್ಟವಾಗಿಯೂ ಇದ್ದು, ಶಕ್ತಿ ಮತ್ತು ಜ್ಞಾನವನ್ನು ಕೊಡುಯೆಂದು ಪ್ರಾರ್ಥಿಸಿಕೊಳ್ಳಬೇಕು.  ಏನೇನೋ ಕ್ಷುಲ್ಲಕ ಕಾರಣಗಳನ್ನು ನಮಗೆ ನಾವೇ ಕೊಟ್ಟುಕೊಳ್ಳುತ್ತಾ, ಭಗವದಾರಾಧನೆಯನ್ನು ತಪ್ಪಿಸಬಾರದು.  ಪೂಜೆಯ ಸಮಯದಲ್ಲಿ ಕೂಡ, ನಮ್ಮದೇ ಭೌತಿಕ ಕಾರಣಗಳಿಂದ ಭಗವಂತನ ಸ್ಮರಣೆ / ಸ್ತೋತ್ರದಲ್ಲಿ ತಪ್ಪು ಮತ್ತು ತೊದಲು ನುಡಿಗಳು ಇರಬಾರದು. 


ಬಾಲಕನ ಕಲಭಾಷೆ ಜನನಿಯು ಕೇಳಿ ಸುಖಪಡುವಂತೆ - ’ಕಲ’ ಎಂದರೆ ಮಂದವಾಗಿ ಅಸ್ಪಷ್ಟವಾಗಿದ್ದರೂ ಕೇಳಲು ಮಧುರವಾದಂತಹ ಧ್ವನಿ ಅಥವಾ ಭಾಷೆಯಾಗಿದೆ.  ಮಗುವಿನ ತೊದಲು ನುಡಿ ಕೇಳುವುದೆಂದರೆ ತಾಯಿಗೆ ಅಪರಿಮಿತ ಸಂತೋಷವಿರುತ್ತದೆ.  ಹಾಗೇ ತನ್ನ ಭಕ್ತರು ನುಡಿವ ಅಸ್ಪಷ್ಟವಾದ ತೊದಲು ನುಡಿಗಳ ಸ್ತುತಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ ಭಗವಂತನು ಹಿಗ್ಗುತ್ತಾನೆ.  ಪುಟ್ಟ ಮಕ್ಕಳ ತೊದಲು ನುಡಿ ಎಂದರೆ ಅದು ಅಸ್ಪಷ್ಟವಾಗಿರುವುದರ ಜೊತೆಗೆ ಅಸಂಬದ್ಧವೂ ಮತ್ತು ಅಶುದ್ಧವೂ ಕೂಡ ಆಗಿರುತ್ತದೆ.  ಹಾಗೇ ತನ್ನ ಭಕ್ತರ ಅಸಂಬದ್ಧ, ಅಶುದ್ಧ ನುಡಿಗಳನ್ನು ಭಗವಂತ ಅಪಾರ ಕರುಣೆಯಿಂದಲೇ ಸ್ವೀಕರಿಸುತ್ತಾನೆ.  ಜನನಿಯಂತೆ ಸುಖಿಸುತ್ತಾ, ತಪ್ಪುಗಳನ್ನು ಎಣಿಸದೆಲೆ, ಸ್ತೋತ್ರ ಮಾಡುವ ಭಾವವನ್ನೂ, ಭಕ್ತಿಯನ್ನೂ ಮಾತ್ರ ಸ್ವೀಕರಿಸಿ, ಭಕ್ತರನ್ನು ಪೊರೆಯುತ್ತಾನೆ.  ಜಗನ್ನಾಥ ದಾಸರು  "ನೀಚನಲ್ಲವೇ ಇವನು ನೀಚನಲ್ಲವೇ"  ಎಂಬ ತಮ್ಮ ಕೃತಿಯಲ್ಲಿ "ಜನನಿ ಜನಕರಂತೆ ಜನಾರ್ದನನು ಸಲಹುತಿರಲು ಬಿಟ್ಟು | ಧನಿಕರ ಮನೆಮನೆಗಳರಸಿ ಶುನಕನಂತೆ ತಿರುಗುವವನು ನೀಚನು ಎಂದಿದ್ದಾರೆ.   ದಾಸರಾಯರು ತಮ್ಮ ನರಸಿಂಹ ಸುಳಾದಿಯಲ್ಲಿ "ಭಗವಂತ ನೀನೆ ದಯಾಳು ಎಂದರಿದು ನಾ ಪೊಗಳಿದೆನೊ, ಯಥಾಮತಿಯೊಳಗೆ ಲೇಶ, ಬಗೆಯದಿರೆನ್ನಪರಾಧ ಕೋಟಿಗಳನು, ಜಗತೀಪತಿ ತನ್ನ ಮಗುವಿನ ತೊದಲು ಮಾತುಗಳನು ಕೇಳಿ ತಾ ನಗುತಲಿ ಕಾಮಿತ ಬಗೆ ಬಗೆಯಿಂದ ಪೂರ್ತಿಸಿ ಮಿಗೆ ಹರುಷದಿ ಬಿಗಿದಪ್ಪಿ ಮೋದಿಪನಲ್ಲದೆ ಶಿಶುವಿನ ತೆಗೆದು ಬಿಸುಟು ಮತ್ತೆ ಹಗೆಗೊಂಬನೇನೋ ತ್ರೈಯುಗನೇ" ಎನ್ನುತ್ತಾ ಭಗವಂತ ಭಕ್ತರನ್ನು ಜನನಿಯಾಗಿಯೂ ಜನಕನಾಗಿಯೂ ಪೊರೆಯುವನೆಂಬುದನ್ನು ತಿಳಿಸುತ್ತಾರೆ.


ಲಕುಮೀಲೋಲ ಹೆದ್ದೈವ - ಲಕ್ಷ್ಮೀಪತಿಯಾದ ಶ್ರೀಹರಿಯು ಸರ್ವ ದೇವಾನು ದೇವತೆಗಳಲ್ಲೂ ಉತ್ತಮನು, ಪರಮ ಪುರುಷನು ಆಗಿದ್ದಾನೆ.  ಅವನೇ ಹಿರಿದಾದ ದೈವ ಮತ್ತು ಹೆದ್ದೈವವು.  ಸಮುದ್ರ ಮಥನದಲ್ಲಿ ಲಕ್ಷ್ಮೀದೇವಿ ಉದಿಸಿದಾಗ ಬೇರೆ ಎಲ್ಲಾ ದೇವತೆಗಳನ್ನೂ ತಿರಸ್ಕರಿಸಿ, ಹರಿ ಸರ್ವೋತ್ತಮನೆಂದು ಅವನಿಗೇ ಒಲಿದಳು, ವರಿಸಿದಳು, ವಂದಿಸಿದಳು.  ಸಮಸ್ತ ಜೀವರಾಶಿಗಳ ಮನದೊಳಗೆ ಮನವಾಗಿ, ಆನಂದಮಯನಾಗಿರುವವನು ಭಗವಂತ.  ಅವನಿಗೆ ಯಾರು ಸ್ತುತಿಸಿದರೂ ಅಥವಾ ಬಿಟ್ಟರೂ ಏನೂ ಆಗಬೇಕಿಲ್ಲ.  ಅವನು ಭಕ್ತರ ಸಂಸ್ತುತಿಯನ್ನು ಆಲಿಸಿ, ಹಿಗ್ಗುವನೆಂದರೆ, ಅದು ನಮ್ಮ ಉದ್ಧಾರಕ್ಕಾಗಿಯೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ.


ತಾಳ ತನ್ನವರಲ್ಲಿ ಮಾಡುವ ಹೇಳನವ - ಭಗವಂತ ತನ್ನ ಭಕ್ತರನ್ನು ತನ್ನ ಮಕ್ಕಳಂತೇ ಪಾಲಿಸುವ, ಪೋಷಿಸುವ, ಪೊರೆಯುವ.  ಭಕ್ತ ಪರಾಧೀನನಾಗಿದ್ದಾನೆ.  ತನ್ನ ಮಗುವಿನಲ್ಲಿ ಅದೆಷ್ಟೇ ದೋಷವಿದ್ದರೂ ಕೂಡ ಬೇರೆಯವರು ಅವಹೇಳನ ಮಾಡಿದಾಗ ತಾಯಿ ಹೇಗೆ ಸಹಿಸುವುದಿಲ್ಲವೋ ಹಾಗೆ ಭಗವಂತ ಕೂಡ ತನ್ನ ಭಕ್ತರನ್ನು ಯಾರಾದರೂ ಅವಮಾನಿಸಿದರೆ, ನೋಯಿಸಿದರೆ, ಅದನ್ನು ಸಹಿಸನು.  ತನ್ನ ಭಕ್ತರನ್ನು ದ್ವೇಷಿಸುವವರನ್ನು ಕಂಡು ಶ್ರೀಹರಿ ಉಗ್ರನಾಗುತ್ತಾನೆ.  ನವವಿಧ ಭಕ್ತಿಯಿರುವಂತೆ, ನವವಿಧ ದ್ವೇಷಗಳಲ್ಲಿ ತನ್ನ ಭಕ್ತರನ್ನು ದ್ವೇಷಿಸುವುದೂ ಒಂದೆಂದು ಪರಿಗಣಿಸಿಬಿಟ್ಟಿದ್ದಾನೆ.  ಪುಟ್ಟ ಬಾಲಕ ಪ್ರಹ್ಲಾದನನ್ನು ದ್ವೇಷಿಸಿದ ತಂದೆ ಹಿರಣ್ಯಕಶಿಪುವನ್ನು ಉಗ್ರವಾಗಿಯೇ ಭಗವಂತ ಶಿಕ್ಷಿಸಿದರೂ ಅದು ಭಗವಂತನ ಕ್ರೋಧವಲ್ಲ, ವಾಸ್ತವವಾಗಿ ಪ್ರಹ್ಲಾದನ ಭಕ್ತಿಗೆ ಒಲಿದ ಕಾರುಣ್ಯವೇ ಆಗಿದೆ.   "ದಾಸರಿಗುಂಟೆ ಭಯ ಶೋಕ ಹರಿ" ಎಂಬ ಕೃತಿಯಲ್ಲಿ "ಏನು ಮಾಡಿದಪರಾಧವ ಕ್ಷಮಿಸುವ | ಏನು ಕೊಟ್ಟುದನು ಕೈಗೊಂಬ | ಏನು ಬೇಡಿದಿಷ್ಟಾರ್ಥವ ಕೊಡುವ | ದಯಾನಿಧಿ ಅನುಪಮನೆಂಬ ಹರಿ" ಎಂದಿದ್ದಾರೆ.


ವಿದುರನ ಆಲಯದಿ ಪಾಲುಂಡ - ಸಂಧಾನಕ್ಕಾಗಿ ಬಂದ ಶ್ರೀಕೃಷ್ಣ ಕೌರವೇಂದ್ರನು ನೀಡಿದ ಭೋಜನದ ಆಮಂತ್ರಣವನ್ನು ತಿರಸ್ಕರಿಸಿ, ವಿದುರನ ಮನೆಗೆ ಹೋಗಿ ಹಾಲು ಕುಡಿದ.  ಇದು ದುರ್ಯೋಧನನಿಗೆ ದೊಡ್ಡ ಅವಮಾನವಾಗಿತ್ತು.  ಶ್ರೀಮದಾಚಾರ್ಯರು ಮಹಾಭಾರತ ತಾತ್ಪರ್ಯ ನಿರ್ಣಯದಲ್ಲಿ "ಸಂಪೂಜಿತಃ ಸರ್ವ ಸಮರ್ಪಣೇನ" ಎಂದಿದ್ದಾರೆ.  ಇದರ ಅರ್ಥ ವಿದುರ ಭಗವಂತನಿಗೆ ಬರಿಯ ಹಾಲನ್ನಲ್ಲದೆ, ತನ್ನನ್ನೇ ಸಮರ್ಪಿಸಿಕೊಳ್ಳುತ್ತಾನೆ.  ಕಡುಬಡವನಾದರೂ ವಿದುರ ಹಾಲಿನ ಜೊತೆ ತನ್ನ ಆತ್ಮ ಸಮರ್ಪಣೆ ಮಾಡಿಕೊಂಡಿದ್ದನ್ನು ಶ್ರೀಕೃಷ್ಣ ಅತ್ಯಂತ ಪ್ರೀತಿಯಿಂದ ಸ್ವೀಕರಿಸಿ ಉದ್ಧರಿಸುತ್ತಾನೆ.  ದುರ್ಯೋಧನ ರಾಜಾತಿಥ್ಯವನ್ನೇ ನೀಡಬಲ್ಲವನಾಗಿದ್ದರೂ ಭಗವಂತ ಅದನ್ನು ಸ್ವೀಕರಿಸಲಿಲ್ಲ.  ವಿದುರ ಕಡುಬಡವನಾದರೂ ತನ್ನಲ್ಲಿದ್ದ ಎಲ್ಲವನ್ನೂ, ಜೊತೆಗೆ ತನ್ನನ್ನೂ ಭಗವಂತನಿಗೆ ಸಮರ್ಪಿಸಿಕೊಂಡುಬಿಡುತ್ತಾನೆ.   ಶ್ರೀಕೃಷ್ಣನು ಸಂಧಾನಕ್ಕಾಗಿ ಕೌರವರ ಅರಮನೆಗೆ ಬಂದಾಗ, ಪರಮ ಭಕ್ತನಾದ ವಿದುರನು ’ಅತಿಥಿ ದೇವೋ ಭವ’ ಎಂದು ಒಂದು ಕುಡಿಕೆ ಹಾಲನ್ನು ಕೊಡುತ್ತಾನೆ.  ಶ್ರೀಕೃಷ್ಣನಿಗೆ ಪಾದಾಭಿಷೇಕವಾದ ಹಾಲಿನ ಬಿಂದುಗಳು ಸಮೃದ್ಧಿಯಾಗಿ, ಕಡಲಾಗಿ, ಕೌರವ ಚಕ್ರವರ್ತಿ ದುರ್ಯೋಧನನ ಅರಮನೆಯೇ ಮುಳುಗುವಂತೆ ಮಾಡಿ, ಕೃಷ್ಣ ಪರಮಾತ್ಮನು ಕೌರವನ ಮಾನವನ್ನೇ ಕೊಂಡ ಎಂದು ಗದುಗಿನ ಭಾರತದಲ್ಲಿ ಕುಮಾರವ್ಯಾಸರು ಹೇಳುತ್ತಾರೆ.


ಅನವರತವೂ ಭಗವಂತನ ನಾಮ ಸ್ಮರಣೆ ಮಾಡುತ್ತಾ, ಹರಿಕಥೆಗಳನ್ನು ಆಲಿಸುತ್ತಾ ಮನವನ್ನು ಭಗವಂತನೆಂಬ ಮನದೊಳಗೆ ನೆಲೆಯಾಗಿಸಿದ್ದರೆ, ಭಗವಂತನೆಂದಿಗೂ ನಮ್ಮನ್ನು ಪೊರೆಯುವನು.  ಇಂತಹ ಕರುಣಾಮಯಿಯಾದ ಶ್ರೀಹರಿಯ ಕಾರುಣ್ಯ ನಮಗೆ ಲಭಿಸಬೇಕಾದರೆ ನಾವು "ಹರಿಭಕ್ತರಿದ್ದೆಡೆಗೆ ಹರಿದು ಹೋಗಲಿ ಬೇಕು | ಹರಿಯ ನಾಮತ್ರಯಾಂಕಿತರಿಗೆರಗಲು ಬೇಕು | ಗುರುಹಿರಿಯರವಗುಣಗಳೆಣಿಸದಿರ ಬೇಕು || ಎಂದು ಜಗನ್ನಾಥ ದಾಸರು ತಮ್ಮ "ಇನಿತೆಂದು ಶಾಸ್ತ್ರ ಪೇಳುವವು" ಎಂಬ ಕೃತಿಯಲ್ಲಿ ತಿಳಿಸಿದ್ದಾರೆ.


ಶ್ರೀ ಜಗನ್ನಾಥ ದಾಸರು ತಮ್ಮ ತತ್ತ್ವಸುವ್ವಾಲಿಯಲ್ಲಿ :

ಸುಲಭರಿನ್ನುಂಟೆ ನಿನ್ನುಳಿದು ಲೋಕತ್ರಯದಿ
ಬಲವಂತರುಂಟೆ ಸುರರೊಳು | ಸುರರೊಳು ನೀನು ಬೆಂ-
ಬಲವಾಗಿ ಇರಲು ಭಯವುಂಟೆ - ಭಕ್ತರಿಗೆ ತಮ್ಮ ಜೀವಿತ ಕಾಲದಲ್ಲಿ ಬರುವ ಎಲ್ಲಾ ತರಹದ ಭಯಗಳನ್ನೂ ಪರಿಹರಿಸುವವನು ಶ್ರೀಹರಿಯೊಬ್ಬನೇ ಆಗಿದ್ದಾನೆ.  ಸ್ಮರಿಸಿದ ಮಾತ್ರವೇ, ಕರೆಗೆ ಓಗೊಡುವ ಮಗುವಿನಂತೆ ಧಾವಿಸುವ ಭಗವಂತನು ಅತೀ ಸುಲಭನೂ ಹಾಗೂ ಅಷ್ಟೇ ಬಲವಂತನು.  ಅವನೇ ಸ್ವತಃ ಭಕ್ತರಿಗೆ ಬೆಂಬಲವಾಗಿರಲು ಯಾವುದೇ ಚಿಂತೆಯೂ, ಭಯವೂ ಇಲ್ಲವೇ ಇಲ್ಲ.

ಶ್ರೀನಾಥ ನಿನ್ನವರ ನಾನಾಪರಾಧಗಳ

ನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ - ಶ್ರುತಿ ಸ್ಮೃತಿಗಳು ಸ್ವಯಂ ಭಗವಂತನ ಆಜ್ಞೆಗಳು ಮತ್ತು ನಾನಾ ವಿಧಿನಿಷೇಧಗಳನ್ನು ನಿರೂಪಿಸುವಂತಹವು.  ಭಕ್ತರು ಅವುಗಳನ್ನು ನಿಷ್ಠವಾಗಿ ಆಚರಣೆ ಮಾಡಬೇಕು ಮತ್ತು ಅವುಗಳನ್ನು ಅತಿಕ್ರಮಿಸುವುದು ಅಪರಾಧವಾಗುತ್ತದೆ.  ಹಾಗೆ ಮಾಡುವುದು ಶ್ರೀಹರಿಯ ಆಜ್ಞೆಯನ್ನು ಉಲ್ಲಂಘಿಸಿದಂತೆಯೇ.  ಆದರೆ ಈ ರೀತಿಯ ಅಪರಾಧಗಳನ್ನು ಎಣಿಕೆಗೆ ಬಾರದಷ್ಟು ಸಂಖ್ಯೆಯಲ್ಲಿ ಪ್ರತಿದಿನವೂ ಭಕ್ತರು ಮಾಡುತ್ತಲೇ ಇರುತ್ತಾರೆ.  ಸರ್ವಾಂತರ್ಯಾಮಿಯಾದ ಭಗವಂತ  ಎಲ್ಲವೂ ತಿಳಿದಿದ್ದರೂ ಕೂಡ, ನಾವು ಮಾಡುವ ಸಂಸ್ತುತಿಗೆ ಹಿಗ್ಗುತ್ತಾ, ನಮ್ಮನ್ನು ಉದ್ಧರಿಸುವವನು ಆ ಹೆದ್ದೈವನಾಗಿದ್ದಾನೆ.

ನಾ ನಿನ್ನ ಮರೆತರೂ ನೀನೆನ್ನ ಮರೆಯದಲೆ

ಸಾನುರಾಗದಲಿ ಸಲಹುವಿ | ಸಲಹುವಿ ಸರ್ವಜ್ಞ
ಏನೆಂಬೆ ನಿನ್ನ ಕರುಣಕ್ಕೆ -  ತಾಯಿಯೆಂದಿಗೂ ತನ್ನ ಮಗುವನ್ನು ಮರೆಯುವುದಿಲ್ಲ, ಅಲಕ್ಷಿಸುವುದಿಲ್ಲ.  ಹಾಗೇ ಭಗವಂತ ಕೂಡ ತನ್ನ ಭಕ್ತರು ತನ್ನನ್ನು ಮರೆತರೂ ಕೂಡ, ತಾನು ಅವರನ್ನು ಮರೆಯದೇ, ವಾತ್ಸಲ್ಯದಿಂದ, ಕಾರುಣ್ಯದಿಂದ ಕಾಪಾಡುವನು.

ಪರಮಾತ್ಮನಿಗೆ ತನ್ನ ಭಕ್ತ ಕಡುಬಡವನೋ  ಅಥವಾ ಶ್ರೀಮಂತನೋ, ರಾಜಾತಿಥ್ಯ ನೀಡಬಲ್ಲವನೋ ಅಥವಾ ಇಲ್ಲವೋ ಎಂಬ ಯಾವ ಅಂಶಗಳೂ ಮುಖ್ಯವಲ್ಲವೇ ಅಲ್ಲ.  ಬ್ರಹ್ಮಾಂಡದಲ್ಲಿರುವ ಪ್ರತೀ ಜೀವಿಗೂ ಜನನಿಯೂ ಮತ್ತು ಜನಕನೂ ಎರಡೂ ಆಗಿರುವ ಭಗವಂತನಿಗೆ ಪ್ರಿಯರು - ಅಪ್ರಿಯರು, ಮಿತ್ರರು - ದ್ವೇಷಿಗಳು ಎಂಬೆಲ್ಲಾ ತಾರತಮ್ಯಗಳು ಖಂಡಿತವಾಗಿಯೂ ಇಲ್ಲ.  ಆದರೆ ತನ್ನ ಭಕ್ತರನ್ನು ದ್ವೇಷಿಸುವವರನ್ನು ಭಗವಂತ ತಾಳನು ಎಂದು ಮಾತ್ರ ತಿಳಿಯುತ್ತದೆ.  ಶ್ರೀಹರಿಯು ಎಲ್ಲರಲ್ಲೂ ಸಮಾನವಾಗಿ ವ್ಯಾಪಿಸಿರುವನು.  

ಭಗವದ್ಗೀತೆಯಲ್ಲಿ ಭಗವಂತ
ಸಮೋಹಂ ಸರ್ವಭೂತೇಷು ನ ಮೇ ದ್ವೇಷ್ಯೋಸ್ತಿನಪ್ರಿಯಃ |
ಯೇ ಭಜಂತಿ ತು ಮಾಂ ಭಕ್ತ್ಯಾ ಮಯಿ ತೇ ತೇಷು ಚಾಪ್ಯಹಮ್ || - ನಾನು ಎಲ್ಲಾ ಪ್ರಾಣಿಗಳಲ್ಲಿಯೂ ಸಮಭಾವದಿಂದ  ವ್ಯಾಪಕವಾಗಿದ್ದೇನೆ.  ನನಗೆ ಅಪ್ರಿಯರಾದವರು ಯಾರೂ ಇಲ್ಲ ಮತ್ತು ಪ್ರಿಯರಾದವರೂ ಯಾರೂ ಇಲ್ಲ.  ಆದರೆ ಯಾವ ಭಕ್ತರು ನನ್ನನ್ನು ಪ್ರೇಮಭಾವದಿಂದ ಭಜಿಸುತ್ತಾರೋ ಅವರು ನನ್ನಲ್ಲಿದ್ದಾರೆ ಮತ್ತು ನಾನು ಕೂಡ ಅವರಲ್ಲಿ ಪ್ರತ್ಯಕ್ಷವಾಗಿ ಪ್ರಕಟವಾಗಿದ್ದೇನೆ ಎಂದು ತಿಳಿಸಿದ್ದಾನೆ.
ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ | ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ || - ನಿರಂತರವಾಗಿ ನನ್ನ ಧ್ಯಾನಾದಿಗಳಲ್ಲಿ ತೊಡಗಿರುವ ಹಾಗೂ ಪ್ರೇಮದಿಂದ ಭಜಿಸುವ ಭಕ್ತರಿಗೆ ನಾನು ನನ್ನನ್ನು ಪಡೆಯುವಂತಹ ತತ್ತ್ವಜ್ಞಾನರೂಪ ಯೋಗವನ್ನು ಕರುಣಿಸುತ್ತೇನೆ ಎಂದಿದ್ದಾನೆ.

ವಿಷ್ಣು ಸಹಸ್ರನಾಮದಲ್ಲಿ "ವಸುರ್ವ ಸುಮನಾಃ ಸತ್ಯ ಸಮಾತ್ಮ ಸಮ್ಮಿತ ಸಮಃ" : ವಸವೇ ನಮಃ - ವಸವಃ ಎಂದರೆ ಎಲ್ಲವನ್ನೂ ಆಚ್ಛಾದಿಸಿ ವ್ಯಾಪಿಸಿರುವವನು.  ವಸು ಮನಸೇ ನಮಃ - ವಸು ಮನಸೇ ಎಂದರೆ ನಿತ್ಯ ನಿರ್ಮಲನು, ಕ್ಷಮಾಶೀಲನು ಮತ್ತು ಸರ್ವರಲ್ಲಿರುವ ಸದ್ಗುಣಗಳನ್ನು ಮಾತ್ರ ಗುರುತಿಸಿ ಉದ್ಧರಿಸುವವನು ಎಂದರ್ಥ.  ಸಮಾತ್ಮನೇ ನಮಃ - ಸಮಾತ್ಮನೇ ಎಂದರೆ ಯಾವ ವಿಕಾರಗಳೂ ಇಲ್ಲದೆ ರಾಗ ದ್ವೇಷಾದಿ ಭಿನ್ನ ಭಾವಗಳಿಲ್ಲದೆ ಸಕಲ ವಸ್ತುಗಳಲ್ಲಿಯೂ, ಜೀವಿಗಳಲ್ಲಿಯೂ ಚೈತನ್ಯ ರೂಪದಲ್ಲಿ ಸಮವಾಗಿ ಏಕಪ್ರಕಾರವಾಗಿರುವವನು.  ಎಲ್ಲವೂ ತನ್ನದೇ ಸೃಷ್ಟಿಯಾಗಿರುವುದರಿಂದ ಎಲ್ಲರನ್ನೂ, ಎಲ್ಲರಲ್ಲೂ ತಾನೇ ವ್ಯಾಪಿಸಿದ್ದೇನೆಂಬ ಅರ್ಥ.  
 
ಚಿತ್ರಕೃಪೆ : ಅಂತರ್ಜಾಲ

No comments: