Wednesday, June 19, 2013

ಕರುಣಾ ಸಂಧಿ - ೧೦ ನೇ ಪದ್ಯ


ಶರಣ ಜನ ಮಂದಾರ ಶಾಶ್ವತ
ಕರುಣಿ ಕಮಲಾಕಾಂತ ಕಾಮದ
ಪರಮಪಾವನತರ ಸುಮಂಗಳಚರಿತ ಪಾರ್ಥಸಖ |
ನಿರುಪಮಾನಂದಾತ್ಮನಿರ್ಗತ
ಕುರಿತ ದೇವವರೇಣ್ಯನೆಂದಾ
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ  || ೧೦ ||


ಪ್ರತಿಪದಾರ್ಥ : ಶರಣಜನಮಂದಾರ - ಮಂದಾರ ಎಂದರೆ ಸ್ವರ್ಗಲೋಕದಲ್ಲಿ ಜೀವಿಗಳಿಗೆ ಅವರು ಬೇಡಿದ್ದನ್ನು ನೀಡುವ ಒಂದು ವೃಕ್ಷ.  ಆದರೆ ಭಗವಂತನಾದ ಶ್ರೀಹರಿಯು ಶರಣಾಗತರಾಗಿ ಬಂದ ತನ್ನ ಭಕ್ತರಾದ ತ್ರಿವಿಧ ಜೀವರಿಗೆ ಎಲ್ಲ ಲೋಕಗಳಲ್ಲಿಯೂ ರಕ್ಷಣೆ ನೀಡುತ್ತಾ ಮಂದಾರ ವೃಕ್ಷದಂತೆ ಬಯಸಿದ್ದನ್ನೆಲ್ಲಾ ಕೊಡುವವನು, ಶಾಶ್ವತ - ಸದಾ ಸರ್ವದಾ ಏಕಪ್ರಕಾರವಾಗಿ, ಕರುಣಿ - ಅಂತಃಕರಣ ಉಳ್ಳವನಾದವನು, ಕಮಲಾಕಾಂತ - ಲಕ್ಷ್ಮೀದೇವಿಯ ಪತಿಯಾದವನು, ಕಾಮದ - ಅಪರೋಕ್ಷವನ್ನು ಬಯಸುವವರಿಗೆ ಸಾಧನೆಯನ್ನು ಮಾಡಿಸಿ ಅನುಗ್ರಹಿಸುವವನು, ಪರಮಪಾವನತರ - ರಮಾದೇವಿಗಿಂತಲೂ ಶ್ರೇಷ್ಠವಾದ ಅಪ್ರಾಕೃತ ಶರೀರವನ್ನುಳ್ಳವನು, ಸುಮಂಗಳಚರಿತ - ಪವಿತ್ರವಾದ ಮಂಗಳಕರವಾದ ಚರಿತ್ರೆಯನ್ನುಳ್ಳವನು, ಪಾರ್ಥಸಖ - ಅರ್ಜುನನಿಗೆ ಪ್ರಿಯನಾದ ಸಖನಾದವನು, ನಿರುಪಮಾನಂದಾತ್ಮ - ಉಪಮೆಯೇ ಇಲ್ಲದ ಆನಂದವೇ ದೇಹವಾಗಿ ಉಳ್ಳವನು, ನಿರ್ಗತದುರಿತ - ನಿರ್ಗತ ಎಂದರೆ ಹೋಗಲ್ಪಟ್ಟ ಮತ್ತು ದುರಿತ ಎಂದರೆ ಪಾಪಗಳು ಅಂದರೆ ದೋಷರಹಿತನಾದ ಭಗವಂತನು, ದೇವವರೇಣ್ಯ - ಸಮಸ್ತ ದೇವತೆಗಳಿಂದಲೂ ಸ್ತುತಿಸಲ್ಪಡುವವನು, ಆದರದಿ ಕರೆಯಲು - ಶ್ರದ್ಧೆ ಮತ್ತು ಭಕ್ತಿಗಳಿಂದ ಪ್ರೀತಿಯಿಂದ ಕರೆದಾಗ, ಬಂದೊದಗುವನು - ಭಕ್ತರ ಮೊರೆಯನ್ನು ಆಲಿಸಿ ಧಾವಿಸಿಕೊಂಡು ಬರುವನು, ತನ್ನವರ ಬಳಿಗೆ - ಒಂದೇ ಮನಸ್ಸಿನಿಂದ ನೀನೇ ಗತಿಯೆಂದು ಪ್ರಲಾಪಿಸುವ ಭಕ್ತರ ಕರೆಗೆ ಓಗೊಟ್ಟು ಅವರ ರಕ್ಷಣೆಗೆ ಸರಿಯಾದ ಸಮಯಕ್ಕೆ ಬರುವವನು.

ನಾಹಂ ಕರ್ತ ಹರಿಃ ಕರ್ತ ಎಂಬ ನ್ಯಾಯದಿಂದ ಶರಣ ಜನರಿಗೆ ಮಂದಾರವಾಗಿರುತ್ತಾನೆ, ಎಂದರೆ ದೇವಲೋಕದ ಕಲ್ಪವೃಕ್ಷದ ಮಂದರ ಹೂವಿನಂತೆ ಸದಾ ಕಂಗೊಳಿಸುತ್ತಿರುತ್ತಾನೆ.  ಅವನು ಅಂತಿಂತಹ ಕರುಣಿಯಲ್ಲ, ಶಾಶ್ವತ ಕರುಣಿ.  ಕಮಲೆಯನ್ನೇ ಕಾಂತೆಯಾಗಿ ಪಡೆದ ಕಮಲಾಕಾಂತ.  ಕೇಳಿದ್ದನ್ನೆಲ್ಲಾ ಕೊಡತಕ್ಕವ ಅಂದರೆ ಅಪರೋಕ್ಷವನ್ನು ಬಯಸುವವರಿಗೆ ಸಾಧನ ಮಾಡಿಸಿ ದರ್ಶನ ಕೊಡುವಂತ "ಕಾಮದ".  ರಮಾದೇವಿಗಿಂತಲೂ ಉತ್ತಮನಾದ್ದರಿಂದ ಪಾವನಕರ.  ರಮಾ ನಾರಾಯಣರು ಅವಿಭಾಜ್ಯರಾದರೂ ನಾರಾಯಣ ಅಲ್ಲಿಯೂ ಶ್ರೇಷ್ಠ ಚರಿತ.  ಅರ್ಜುನನಿಗೆ ಗೀತೆಯಂತಹ ಮಹಾತತ್ವವನ್ನು ಬೋಧಿಸಿ "ಪಾರ್ಥಸಖ" ಎನಿಸಿಕೊಂಡಿದ್ದಾನೆ.  ಉಪಮೆಯಿಲ್ಲದಂತ ಆನಂದವನ್ನು ಕೊಡುವುದರಿಂದ ಅವನು ನಿರುಪಮಾನಂದಾತ್ಮ.

ಕಲ್ಪವೃಕ್ಷಕ್ಕೆ ಹಿತವಾವುದು, ಅಹಿತವಾವುದೆಂದು ತಿಳಿಯದು.  ಬಯಸಿದ್ದನ್ನು ಕೊಡಬಲ್ಲದು ಆದರೆ ಬಯಸಿದ್ದೆಲ್ಲವನ್ನೂ ಕೊಡಲಾರದ್ದು.  ಹೊಟ್ಟೆ ತುಂಬಾ ಊಟ ಮಾಡಿರುವ ಮಗು ಮತ್ತೆ ಸಿಹಿ ತಿಂಡಿ ಅಥವಾ ಭಕ್ಷ್ಯಗಳನ್ನು ಕೇಳಿದರೆ, ತಾಯಿ ಆಮೇಲೆ ಕೊಡುವೆನೆಂದು ಹೇಳುವುದು ಅದರ ಆರೋಗ್ಯ ಕೆಡಬಾರದೆಂಬ ಒಂದೇ ಒಂದು ಕಾಳಜಿಯಿಂದ ಮಾತ್ರ.  ಅದೇ ರೀತಿ ಭಗವಂತ ಕೂಡ ಕೆಲವೊಮ್ಮೆ ನಾವು ಕೇಳಿದ ಎಲ್ಲವನ್ನೂ ನಮಗೆ ಯೋಗ್ಯತೆ ಇದ್ದರೂ ಕೂಡ ಕೊಡುವುದಿಲ್ಲ.  ಇತರ ದೇವತೆಗಳಂತೆ ಶ್ರೀಹರಿ ಅಷ್ಟು ಬೇಗ ಒಲಿಯುವುದಿಲ್ಲ, ಅವನು ತನ್ನ ಭಕ್ತರಾದ ಸಾತ್ವಿಕರ ಸತ್ವಗುಣ ಅಭಿವೃದ್ಧಿಯಾಗಲೆಂದು ಕಾಯುತ್ತಾನೆ. ಏಕೆಂದರೆ ಜೀವರು ಸಂಸಾರದಲ್ಲಿ ಅಜ್ಞಾನಿಗಳು, ತಮಗೆ ಯಾವುದು ಹಿತವೆಂದು ತಿಳಿಯದವರು.  ಎಲ್ಲವನ್ನೂ ಬೇಡುವ ಭರಾಟೆಯಲ್ಲಿ ಅಹಿತವನ್ನೂ ಬೇಡಿಬಿಡುವರು.  ಆದ್ದರಿಂದ ಶ್ರೀಹರಿ ಬೇಡಿದುದನ್ನೆಲ್ಲವನ್ನೂ ಕಣ್ಮುಚ್ಚಿ ಪೂರೈಸುವುದಿಲ್ಲ ಮತ್ತು ಈಡೇರಿಸಿದ ಲೌಕಿಕ ಪುರುಷಾರ್ಥಗಳಿಂದ ಭಕ್ತ ತನ್ನಿಂದ ವಿಮುಖನಾಗಬಾರದೆಂಬ ಕಾಳಜಿಯಿಂದ, ತಾಯಿಯಂತೆ ಪೊರೆವನು ಎಂದು ತಿಳಿಯಬೇಕು.  ಶ್ರೀಹರಿ ಎಂದಿಗೂ ತಾಮಸರಿಗೆ ಒಲಿಯುವುದೇ ಇಲ್ಲ.  ಭಗವಂತ ಕೇವಲ ಮೋಕ್ಷವನ್ನಷ್ಟೇ ಕೊಡುವುದಿಲ್ಲ, ಮೋಕ್ಷ ಸಾಧನೆಗೆ ಪೂರಕವಾದ ವಿಷಯ ಸುಖವನ್ನೂ, ಸುಸ್ಥಿತವಾದ ದೇಹವನ್ನೂ, ಅವನ ಪಾದದಲ್ಲಿ ನೆಲೆಸುವಂತಹ ಮನಸ್ಸನ್ನೂ ಕೂಡ ಕೊಟ್ಟು, ಸಲಹುತ್ತಾನೆ, ಸಾಧನೆಗೆ ಅವಕಾಶ ಮಾಡಿಕೊಡುತ್ತಾನೆಂಬ ವಿಚಾರವನ್ನು ಸ್ಪಷ್ಟ ಪಡಿಸುವುದಕ್ಕಾಗಿ ಇಲ್ಲಿ ’ಕಲ್ಪವೃಕ್ಷ’ದ ದೃಷ್ಟಾಂತವನ್ನು ಕೊಡಲಾಗಿದೆ.  ಕಲ್ಪವೃಕ್ಷ ಕೂಡ ಕೇವಲ ವಿಷಯ ಸುಖಗಳನ್ನು ಮಾತ್ರ ಕರುಣಿಸಬಲ್ಲದೆಂದೂ, ಮೋಕ್ಷ ಕೊಡಲಾರದೆಂದೂ ತಿಳಿಯಬಾರದು, ಅದು ತತ್ವಜ್ಞಾನವನ್ನೂ ಕೊಡಬಲ್ಲಂತಹದು.  ಹರಿ ಎಂದಿಗೂ ತನ್ನಲ್ಲಿ ಶರಣಾಗತರಾದ ತ್ರಿವಿಧ ಜೀವರಿಗೆ ಮಾತ್ರವೇ ಎಲ್ಲಾ ಲೋಕಗಳಲ್ಲೂ ಕಲ್ಪವೃಕ್ಷದಂತೆ ಅಪೇಕ್ಷಿತವಾದ ಸುಖವನ್ನು ನೀಡುತ್ತಾನಾದ್ದರಿಂದಲೇ ಅವನು ’ಶರಣಜನ’ ಎನಿಸಿಕೊಳ್ಳುತ್ತಾನೆ.  ತನ್ನನ್ನು ದ್ವೇಷಿಸುವವರಿಗೆ ಅವನು ಎಂದಿಗೂ, ಏನನ್ನೂ ನೀಡುವುದಿಲ್ಲ. 


ಶಾಶ್ವತ ಕರುಣಿ - ಭಗವಂತ ಶರಣಾಗತರಾದವರನ್ನು ಶಾಶ್ವತವಾಗಿ ಕರುಣೆಯಿಂದ ಕಾಣುವ.  ದುರ್ಯೋಧನನಿಗೆ ಐಶ್ವರ್ಯ, ರಾಜ್ಯ ಎಲ್ಲವನ್ನೂ ಕೊಟ್ಟರೂ ಕೂಡ, ಆ ಕರುಣೆ ಅಶಾಶ್ವತವಾಗಿತ್ತು.  ಆದರೆ ಪಾಂಡವರಿಗೆ ವನವಾಸವೇ ಕೊಟ್ಟರೂ ಕೂಡ, ಅವರ ಮೇಲೆ ಶ್ರೀಹರಿಯ ಕರುಣೆಯ ಕಟಾಕ್ಷ ನಿರಂತರ ಶಾಶ್ವತಕರುಣೆಯಾಗಿತ್ತು, ಅನರ್ಥ ಶಾಶ್ವತವಾಗಿರಲಿಲ್ಲ.  ಪಾಂಡವರಿಗೆ ಕೊನೆಯಲ್ಲಿ ಶಾಶ್ವತ ಸುಖವನ್ನೇ ಕರುಣಿಸಿದ.  ತಾನಿತ್ತ ಸಂಪತ್ತನ್ನು ಉಳಿಸಿಕೊಳ್ಳಲು ಅಥವಾ ಸಾರ್ಥಕವಾಗಿ ಬಳಸಿಕೊಳ್ಳಲು ತಿಳಿಯದಂತಹ ದುಷ್ಟನಿಗೆ, ಒಮ್ಮೆಲೇ ಅಪಾರ ಸಂಪತ್ತು ಕೊಟ್ಟು, ನಾಶಮಾಡಿಬಿಡುತ್ತಾನೆ.  ಆದರೆ ಸಜ್ಜನಾದ ವ್ಯಕ್ತಿಗೆ ನಾನಾ ತರಹದ ಅಗ್ನಿಪರೀಕ್ಷೆಗಳನ್ನೇ ಕೊಟ್ಟರೂ ಸಹ ಬಹುವಾಗಿ ಸಹನಾಶಕ್ತಿಯನ್ನೂ ನೀಡಿ, ಕೊನೆಯಲ್ಲಿ ಶಾಶ್ವತ ಸಂಪತ್ತನ್ನು ಕೊಡುತ್ತಾನೆ.  ಇದೇ ಭಗವಂತನ ಶಾಶ್ವತ ಕರುಣೆ ಅದಕ್ಕೇ ಅವನು ಎಂದಿಗೂ, ಯಾವ ಏರಿಳಿತಗಳೂ ಇಲ್ಲದಂತಹ ಶಾಶ್ವತ ಕರುಣಿ.   

ಭಗವಂತ ಕಮಲಾಕಾಂತ - ಯಾವ ರಮಾದೇವಿಯ ಕಟಾಕ್ಷಕ್ಕಾಗಿ ಇಡೀ ಜಗತ್ತು ಹಂಬಲಿಸುವುದೋ, ಅಂತಹ ಲಕ್ಷ್ಮೀದೇವಿಗೆ ಸುಖವನ್ನು ಕರುಣಿಸುವವನು.  ಕಾ - ಎಂದರೆ ನಿರಂತರ ಸುಖ ಕೊಡುವವನು ಎಂದರ್ಥ.  ಲಕ್ಷ್ಮೀದೇವಿಯನ್ನು ಎದೆಯಲ್ಲಿ ಕುಳ್ಳಿರಿಸಿಕೊಂಡಿರುವ ಶಾಶ್ವತಕರುಣಿ, ಶರಣಜನಮಂದಾರ  ಭಗವಂತ.  ಎಲ್ಲಾ ಕಾಲಗಳಲ್ಲೂ ಸದಾ ಲಕ್ಷ್ಮೀದೇವಿಯ ಜೊತೆ ಜೊತೆಗೇ ಇರುತ್ತಾನೆ.  ಲೋಕದ ಎಲ್ಲಾ ಸಂಪತ್ತಿಗೂ ಅವಳನ್ನೇ ಒಡತಿಯನ್ನಾಗಿ ಮಾಡಿದ್ದಾನೆ.  ರಮಾದೇವಿಗೆ ಶ್ರೀಹರಿ ಕಾಂತ, ಶ್ರೀಹರಿಗೆ ರಮಾದೇವಿ ಕಾಂತೆ - ಭಗವಂತ ಎರಡು ಅರ್ಥದಲ್ಲಿ ’ಕಮಲಾಕಾಂತ’. 

ಕಾಮದ - ಹರಿ ಒಲಿದರೆ ಕಾಮದ, ಬೇಗನೆ ಒಲಿಯುವುದಿಲ್ಲ ಏಕೆಂದರೆ ಒಲಿಸಲು ಅರಿಯದೆ ಬಳಲುವವರು ನಾವು ಪಾಮರರು.  ಕಾಮದ ಎಂದರೂ ಬೇಡಿದ್ದನ್ನು ಕೊಡುವವನು ಎಂದೇ ಅರ್ಥವಾಗುತ್ತದೆ.  ಶರಣಜನಮಂದಾರ ಮತ್ತು ಕಾಮದ ಎಂಬ ಎರಡೆರಡು ವಿಶೇಷಣಗಳ ಬಳಕೆಯಾಗಿದೆ ಇಲ್ಲಿ.    ಕಾಮದ ಎಂದರೆ ಕಾಮಿತಪ್ರದ ಮಾತ್ರವಲ್ಲ, ಕಾಮನೆಯನ್ನೂ ನೀಡುವವನು  ಕಲ್ಲಿನಂತೆ ಜಡವಾದ ಜೀವಿಯಲ್ಲಿ ತಾನು ಒಳಗೆ ಪ್ರವೇಶಿಸಿ, ನಾನಾ ಬಗೆಯ ಕಾಮನೆಗಳನ್ನು ಹುಟ್ಟಿಸಿ ಅವುಗಳನ್ನು ತಾನೇ ಕೊಟ್ಟು, ಸುಖಾನುಭವವಾಗುವಂತೆ ಮಾಡುವ ಕರುಣಾಮಯಿ.      ತನ್ನನ್ನೇ ನಂಬಿ ಶರಣು ಬಂದವರಿಗೆ  ಕಲ್ಪವೃಕ್ಷದಂತೆ ಬೇಡಿದ್ದನ್ನು ಕೊಡುವವನೂ ಜೊತೆಗೆ ಕಾಮದನೂ, ಎಂಬ ಎರಡು ವಿಶೇಷ ಗುಣಗಳನ್ನು ತೋರಿಸುವುದಕ್ಕಾಗಿ ಎರಡು ವಿಶೇಷಣಗಳ ಉಪಯೋಗವಾಗಿದೆ.  ಕಾಮದನೆಂದರೆ ಕಾಮನೆಗಳನ್ನು ನಾಶಮಾಡುವವನು ಎಂಬುದೇ ಅರ್ಥವಾದರೂ ಕೂಡ, ಆ ಕಾಮನೆಗಳನ್ನು ಕೊಡುವುದೂ ಕೂಡ ಅವನೇ. ಹೀಗೆ ಲೌಕಿಕದ ಅನೇಕ ಭೋಗಗಳನ್ನು ಕೊಟ್ಟು ಜೀವಿಗಳಿಗೆ ಕ್ಲೇಶಗಳನ್ನು ಉಂಟುಮಾಡಿದರೂ ಕೂಡ, ಕೊನೆಗೆ ಶಾಶ್ವತವಾದ ಮೋಕ್ಷ ಸುಖವನ್ನು ನೀಡಿ ಭವ ಪಾಶದಲ್ಲಿ ಬಳಲಿ ಬೆಂಡಾದ ಸಾತ್ವಿಕರನ್ನು ಅಕ್ಕರೆಯ ತಾಯಿಯಾಗಿ, ಲಾಲಿಸಿ, ಪಾಲಿಸಿ  ಸಂತೈಸುವವನೂ ಶ್ರೀಹರಿಯೇ.  ಇದು ಅವನ ಏರಿಳಿತಗಳಿಲ್ಲದ ಕರುಣೆಗೆ ಸಾಕ್ಷಿಯಾಗಿದೆ.

ಪರಮಪಾವನತರ - ಪ್ರತಿಯೊಂದು ವಸ್ತುವಿಗೂ ಭಗವಂತನ ಸ್ಮರಣೆ ಮಾತ್ರದಿಂದಲೇ ಪರಿಶುದ್ಧತೆ ಬರುತ್ತದೆ, ಅಂದರೆ ಅತೀ ಶುದ್ಧವಾದ ವಸ್ತುಗಳಿಗೂ ಕೂಡ ಪರಿಶುದ್ಧತೆಯನ್ನು ಕಲ್ಪಿಸುವವನು ಭಗವಂತ.  ಅವನ ಚರಿತ್ರೆಯೂ ಕೂಡ ಹಾಗೇ ಶುದ್ಧಾತಿ ಶುದ್ಧ, ದೋಷಗಳೇ ಇಲ್ಲದ, ಪರಮ ಪಾವನಪ್ರದ. ಭೋಗ ಭಾಗ್ಯಗಳನ್ನೆಲ್ಲಾ ಕೊಡುವುದು ಮಾತ್ರವಲ್ಲದೇ, ಅವುಗಳನ್ನು ಪಾವನಗೊಳಿಸುವುದೂ ಕೂಡ ಶ್ರೀಹರಿಯ ಕರುಣೆಯೇ.  ಪವನ ಎಂದರೆ ಎಲ್ಲವನ್ನೂ ಪಾವನಗೊಳಿಸುವವನು.  ಶ್ರೀಹರಿ ಆ ಪವನನನ್ನೂ ಪಾವನಗೊಳಿಸುವ ಪರಮಪಾವನತರನು.  "ಪವನಃ ಪಾವನೋನಲಃ" ಎಂದು ವಿಷ್ಣು ಸಹಸ್ರನಾಮದಲ್ಲಿ ಹೇಳಿದೆ.  ಪವನ ಹಾಗೂ ಪರಮಪಾವನತರ ಹರಿಯ ನಿರ್ಮಾಲ್ಯ ಮತ್ತು ನೈವೇದ್ಯವನ್ನು ಸೇವಿಸುವುದರಿಂದ ಸಾಧಕರ ಶರೀರ ಹಾಗೂ ಅಂತಃಕರಣಗಳು ಶುದ್ಧಿಗೊಳ್ಳುವುವು.  ತತ್ವಜ್ಞಾನ ಸಿದ್ಧಿಯಾಗುವುದು.  ಆದರೆ ಅದಕ್ಕೆ ನಾವು ಶ್ರೀಹರಿಯ ಸುಮಂಗಳ ಚರಿತೆಯನ್ನು ಶಾಸ್ತ್ರದ ಮೂಲಕ ತಿಳಿಯಬೇಕು, ತಿಳಿಯಪಡಿಸುತ್ತಾನೆ ಭಗವಂತ, ಇದು ಅವನ ಶಾಶ್ವತ ಕರುಣೆಯ ರೂಪ.

ಸುಮಂಗಳಚರಿತ - ಶ್ರೀಹರಿಯು ಮಂಗಳಕರನು, ಸದಾ ಮಂಗಳವನ್ನೇ ಕರುಣಿಸುವವನು.  ಕೃಷ್ಣಾವತಾರದ ಮಂಗಳಚರಿತೆಯನ್ನು ಮಾಡಿ ತೋರಿಸಿದವನು.  ವ್ಯಾಸರೂಪಿಯಾಗಿ ತಾನೇ ಅದನ್ನು ಬರೆದು ತೋರಿಸಿದವನು.  ತಾನು ಮಂಗಳಕರನು ಮತ್ತು ತಾನೇ ಮಂಗಳಚರಿತ್ರೆಯುಳ್ಳವನು.

ಪಾರ್ಥಸಖ - ಎಲ್ಲಿ ಧರ್ಮವಿರುವುದೋ ಅಲ್ಲಿ ಭಗವಂತ.  ಪಾಂಡವರ ಪಕ್ಷವಹಿಸಿ, ಅಧರ್ಮವನ್ನು ಮೆಟ್ಟಿ ಧರ್ಮವನ್ನು ನಿಲ್ಲಿಸಿದ ಭಗವಂತ.  ಪಾರ್ಥನಿಗೆ ಸಖನಾಗಿ ಸದಾ ಜೊತೆಗೇ ಇದ್ದು ಉದ್ಧರಿಸಿದ.  ಸಖ ಹಾಗೂ ಮಿತ್ರ ಮೇಲ್ನೋಟಕ್ಕೆ ಪರ್ಯಾಯ ಪದ ಎಂದೆನಿಸಿದರೂ ಅರ್ಥದಲ್ಲಿ ವ್ಯತ್ಯಾಸವಿದೆ.  ಮಿತ್ರನೆಂದರೆ ನಮ್ಮಿಂದ ಯಾವಾಗಲಾದರೂ, ಒಮ್ಮೆಯಾದರೂ ಪ್ರತ್ಯುಪಕಾರ ಬಯಸಿ ಸ್ನೇಹ ಬೆಳೆಸುವವನು.  ಆದರೆ ಸಖನೆಂದರೆ ನಮ್ಮಿಂದ ಯಾವುದೇ ನಿರೀಕ್ಷೆಯಿಲ್ಲದೇ, ಪ್ರತಿಯಾಗಿ, ಯಾವ ಕಾಲದಲ್ಲೇ ಆಗಲಿ, ಎಂತಹ ಸಂದರ್ಭದಲ್ಲೇ ಆಗಲಿ, ಏನನ್ನೂ ಬಯಸದೆ, ನಮಗೆ ಬೆಂಬಲವಾಗಿದ್ದು, ಉಪಕಾರ ಮಾಡುತ್ತಾ, ಸ್ನೇಹದ ಸಿಂಚನ ಮಾಡಿಸುವವನು.  ಇಲ್ಲಿ ಶ್ರೀಹರಿ ಅರ್ಜುನನಿಗೆ ಸಖನಾಗಿದ್ದ ಆದರೆ ಅರ್ಜುನ ಶ್ರೀಕೃಷ್ಣನಿಗೆ ಮಿತ್ರ ಮಾತ್ರನಾಗಬಲ್ಲವನು.  ನಿರ್ಮಲ, ನಿರ್ವಾಜ ಸ್ನೇಹವೆಂದರೆ ಹೇಗಿರಬೇಕೆಂದು, ತಾನು ಅರ್ಜುನನ ಸಖನಾಗಿದ್ದು, ತೋರಿಸಿಕೊಟ್ಟ ಶ್ರೀಕೃಷ್ಣನ ಕರುಣೆಯ ಮತ್ತೊಂದು ರೂಪ.

ನಿರುಪಮಾನಂದಾತ್ಮ - ಉದಾಹರಿಸಲಾಗಲೀ, ಹೋಲಿಕೆಗಾಗಲೀ ಬೇರೆ ಏನೂ ಇಲ್ಲದೇ ಇರುವಂತಹವನು ಭಗವಂತ, ನಿರುಪಮಾನಂದ.  ನಿರುಪಮ ಎಂದರೆ ಉಪಮೆ ಇಲ್ಲದ್ದು ಎಂಬರ್ಥ.  ಅವನು ತಾನೇ ಸ್ವತಃ ಸ್ವರೂಪದಿಂದಲೇ ನಿರುಪಮಾನಂದನು.  ನಮ್ಮ ಪೂಜೆಯಿಂದ ಅವನು ಆನಂದ ಹೊಂದಬೇಕಾಗಿಲ್ಲ ಅಥವಾ ನಿಂದೆಯಿಂದ ದುಃಖ ಪಡಬೇಕಾಗಿಲ್ಲ.  ಭಾಗವತದಲ್ಲಿ ಹೇಳಿರುವಂತೆ ಶ್ರೀಕೃಷ್ಣನು ಸದಾ ಆನಂದಸ್ವರೂಪನು. ಲಕ್ಷ್ಮೀದೇವಿಯ ಆನಂದ ಎಷ್ಟೇ ಇದ್ದರೂ ಕೂಡ  ಅದಕ್ಕಿಂತ ಶ್ರೇಷ್ಠವೆಂದು ನಾರಾಯಣನ ಆನಂದವನ್ನು ತೋರಿಸಬಹುದು, ಆದರೆ ಶ್ರೀಮನ್ನಾರಾಯಣನ ಆನಂದಕ್ಕೆ ಮೀರಿದ್ದು ಮತ್ತೊಂದು ಇಲ್ಲವೇ ಇಲ್ಲ.  ಭಗವಂತ ಹಾಗೂ ಅವನ ಗುಣಗಳಲ್ಲಿ ಯಾವ ಭೇದವೂ ಇಲ್ಲ, ಎಲ್ಲಾ ಗುಣಗಳೂ, ಯಾವಾಗಲೂ ಪರಿಪೂರ್ಣವಾಗಿಯೇ ಇರುತ್ತದೆ.  ಉದಾಹರಿಸಬೇಕೆಂದರೆ ಒಬ್ಬ ಶ್ರೀಮಂತನಾದ ವ್ಯಕ್ತಿಯೇ ಬೇರೆ ಹಾಗೂ ಅವನ ಶ್ರೀಮಂತಿಕೆಯೇ ಬೇರೆ.  ಶ್ರೀಮಂತಿಕೆಯೆಂದರೆ ಅವನ ಹಣ, ಆಸ್ತಿ, ಅಂತಸ್ತು ಎಂಬುದು, ಆದರೆ ಆ ವ್ಯಕ್ತಿ ಒಬ್ಬ ಸಾಧಾರಣ ವ್ಯಕ್ತಿಯಾಗಿಯೇ ಇರುತ್ತಾನೆ ಮತ್ತು ಆ ಶ್ರೀಮಂತನನ್ನೂ, ಶ್ರೀಮಂತಿಕೆಯನ್ನೂ ಬೇರ್ಪಡಿಸಬಹುದಾಗಿರುತ್ತದೆ.  ಆದರೆ ಭಗವಂತನೆಂದರೆ ಅವನ ಗುಣಗಳೂ, ಸ್ವರೂಪಗಳೂ, ಎಲ್ಲವೂ ಅವನೇ ಅವನಿಂದ ಅವುಗಳನ್ನು ಪ್ರತ್ಯೇಕಿಸಲಾಗುವುದಿಲ್ಲ.  ಬಂಗಾರದ ಮೂರ್ತಿಯಲ್ಲಿ ಹೇಗೆ ಬಂಗಾರವೇ ಮೂರ್ತಿ, ಮೂರ್ತಿಯೇ ಬಂಗಾರವಾಗುವುದೋ ಹಾಗೆ ಭಗವಂತ ಮತ್ತು ಅವನ ಗುಣಗಳು.

ನಿರ್ಗತದುರಿತ ದೇವವರೇಣ್ಯ - ನಿರ್ಗತದುರಿತನೆಂದರೆ ಮತ್ತೆ ಭಗವಂತನ ಅದೇ ವಿಶೇಷಣಗಳಲ್ಲೊಂದು.  ಅವನು ಯಾವ ದುರಿತವೂ, ದೋಷವೂ ಇಲ್ಲದವನು.  ಪಾಪಗಳಿಗೆ ಕಾರಣವಾದ ನಿರ್ಗತ (ದೋಷಗಳು) ನಮ್ಮಲ್ಲಿವೆಯೇ ಹೊರತು ಅವುಗಳು ಭಗವಂತನಲ್ಲಿಲ್ಲ. ಅವನು ಪರಿಪೂರ್ಣ.  ಸಕಲ ದೇವತೆಗಳಿಂದಲೂ ಅತ್ಯಂತ ಶ್ರೇಷ್ಠನೆಂದು ಸ್ತುತಿಸಿಕೊಳ್ಳಲ್ಪಡುವವನು.  ಬ್ರಹ್ಮಾದಿ ದೇವತೆಗಳೆಲ್ಲರಿಂದಲೂ ಆರಾಧಿಸಿಕೊಳ್ಳಲ್ಪಡುವವನು.  ಸಕಲ ಜೀವರಾಶಿಗಳನ್ನೂ ಪೋಷಿಸುವವನು.  ಸರ್ವಶ್ರೇಷ್ಠನು.  ವೇದಗಳಿಂದಲೂ ಶಾಸ್ತ್ರೋಕ್ತ ಮಂತ್ರಗಳಿಂದಲೂ ಸ್ತುತಿಸಿಕೊಳ್ಳಲ್ಪಡುವವನು, ದೇವತೆಗಳಲ್ಲೆಲ್ಲಾ ಅಗ್ರಗಣ್ಯನು.

ಆದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ - ಅತೀ ಸುಲಭವಾದ ನಾಲ್ಕು ಅಕ್ಷರಗಳ "ನಾರಾಯಣ" ಎಂಬ ನಾಮದಿಂದ ಕರೆದರೇ ಸಾಕು, ಆದರದಿಂದಲೂ, ಪ್ರೇಮದಿಂದಲೂ ನಮ್ಮ ಬಳಿಗೆ ಬರುವವನೇ ಭಗವಂತ.  ಏನನ್ನು ಬೇಕಾದರೂ ನುಡಿಯಬಲ್ಲಂತಹ ನಾಲಿಗೆಯನ್ನು ಕರುಣಿಸಿದ್ದಾನೆ, ನಾವು ಮನಸ್ಸಿಟ್ಟರೆ ಸಾಕು, ನಮ್ಮ ನಾಲಿಗೆಯಲ್ಲಿ ತಾನೇ ಕುಳಿತು, ತನ್ನ ನಾಮವನ್ನು ನಮ್ಮಿಂದ ನುಡಿಸಿ, ತಾನೇ ಸಂಪ್ರೀತನಾಗಿ, ಸಕಲ ಸೌಭಾಗ್ಯವನ್ನೂ ಕೊಟ್ಟು, ಪಾಲಿಸುತ್ತಾನೆ ಭಗವಂತ.  ಆದರೆ ನಾವು ಕರೆಯುವುದೇ ಇಲ್ಲ.  ತನ್ನ ಭಕ್ತರಾದವನು ಪ್ರಾರಬ್ಧ ಕರ್ಮದ ಫಲದಿಂದ ತನ್ನ ಸೇವೆಯನ್ನು ಮರೆತಿದ್ದರೆ, ಭಗವಂತ ತಾನು ಅಂತಹ ಭಕ್ತರನ್ನು ಎಂದಿಗೂ ಮರೆಯುವುದೇ ಇಲ್ಲ.  ಹರಿಕಥಾಮೃತಸಾರ ಗ್ರಂಥ ಕರ್ತೃಗಳಾದ ಶ್ರೀ ಜಗನ್ನಾಥ ದಾಸರು ತಮ್ಮ ಕರ್ತವ್ಯ ಮರೆತು, ತಮ್ಮದೇ ಭ್ರಮೆಯ ಲೋಕದಲ್ಲಿ ಮುಳುಗಿದ್ದಾಗ, ಅವರನ್ನು ಶ್ರೀವಿಜಯದಾಸರ ಮುಖಾಂತರ, ಅವರಿಗೆ ಕರ್ತವ್ಯ ನೆನಪಿಸಿ, ತನ್ನೆಡೆಗೆ ತಾನೇ ಕರೆಸಿಕೊಂಡ ಶರಣಜನಮಂದಾರ, ಶಾಶ್ವತಕರುಣೀ, ಕಮಲಾಕಾಂತನು ಭಗವಂತನು.  ಈ ಕರುಣೆಗೆಲ್ಲಿಯ ಸಾಟಿ ಎನ್ನುತ್ತಾರೆ ಶ್ರೀಜಗನ್ನಾಥ ದಾಸರು.

ಶ್ರೀ ಜಗನ್ನಾಥ ದಾಸರು ತತ್ವಸುವ್ವಾಲಿಯಲ್ಲಿ :
ಶರಣಪಾಲಕನೆಂಬ ಬಿರುದಿದ್ದ ಮೇಲಿನ್ನು
ಪೊರೆಯದಿರಲೆನ್ನ ನಗರೇನೊ | ನಗರೇನೊ ಮೂರ್ಲೋಕ-
ದರಸ ನೀನಾಗಿ ಇರುತಿರ್ದು || - ಶರಣಾಗತರಾದ ಭಕ್ತರನು ರಕ್ಷಿಸದೆ ಕೈ ಬಿಟ್ಟು ಭಗವಂತ ಅಪಹಾಸಕ್ಕೆ ಎಂದೂ ಗುರಿಯಾಗನು,   ಮೂರ್ಲೋಕವಷ್ಟೇ ಅಲ್ಲ, ಎಲ್ಲಾ ಲೋಕಗಳಿಗೂ ಒಡೆಯನಾದ ನೀನು ಶರಣಾಗತರಾದವರನ್ನು ರಕ್ಷಿಸದಿದ್ದರೆ ’ನಗರೇನೋ’ ಎಂಬ ಯುಕ್ತಿಯನ್ನೂ ಸೇರಿಸಿದ್ದಾರೆ.
ಎಲ್ಲಿ ಹರಿರೂಪ ಮತ್ತಲ್ಲಿ ಗುಣಕ್ರಿಯೆಗಳು
ಅಲ್ಲೆ ಗುಣರೂಪಕ್ರಿಯೆಗಳು | ಕ್ರಿಯೆಗಳು ಗುಣರೂಪ
ಬಲ್ಲವನೆ ಜ್ಞಾನಿ ಜಗದೊಳು || - ಶ್ರೀಹರಿಯು ಎಲ್ಲಿರುತ್ತಾನೋ ಅಲ್ಲೇ, ಆ ರೂಪದಲ್ಲೇ ಅವನ ಗುಣಕ್ರಿಯೆಗಳು, ಅಲ್ಲೇ ಆ ರೂಪ ಗುಣಕ್ರಿಯೆಗಳಲ್ಲಿ ಒಂದೊಂದರಲ್ಲಿಯೂ ಗುಣರೂಪಕ್ರಿಯೆಗಳು, ಅನಂತ ಗುಣರೂಪಕ್ರಿಯೆಗಳೂ ಇರುವುವೆಂದೂ, ಕ್ರಿಯೆಗಳು ಕ್ರಿಯೆಗಳೇ, ಗುಣರೂಪಗಳು ಗುಣರೂಪಗಳೇ ಎಂದು ತಿಳಿದವನೇ ಜ್ಞಾನಿಯೆಂದೆನಿಸಲು ಅರ್ಹನು ಎನ್ನುತ್ತಾರೆ.

ತಮ್ಮದೇ ಆದ ಇನ್ನೊಂದು ಕೃತಿ "ಫಲವಿದು ಬಾಳ್ದುದಕೆ" ಎಂಬುದರಲ್ಲಿ :
ಒಂದುರೂಪದೊಳಂತರೂಪಗಳು
ಪೊಂದಿಪ್ಪವು ಗುಣಗಣಸಹಿತ
ಹಿಂದೆ ಮುಂದೆ ಎಂದೆಂದಿಗೆ ಶ್ರೀಗೋ
ವಿಂದಗೆ ಸರಿಮಿಗಿಲಿಲ್ಲೆಂತೆಂಬುದೆ
ಫಲವಿದು ಬಾಳ್ದುದಕೆ || - ಶ್ರೀಹರಿಯ ಎಲ್ಲಾ ರೂಪಗಳಲ್ಲೂ, ಒಂದೊಂದರಲ್ಲೂ ಅನಂತ ರೂಪಗಳನ್ನು ಹೊಂದಿದೆ, ಆ ಎಲ್ಲಾ ರೂಪಗಳೂ ಭಗವಂತನ ಎಲ್ಲಾ ಗುಣಗಳ ಸಹಿತವೇ ಆಗಿದೆ.  ಅಂದರೆ ಭಗವಂತ ಬೇರೆಯಲ್ಲ, ಅವನ ಗುಣಗಳೂ, ರೂಪಗಳೂ ಬೇರೆಯಲ್ಲವಾದ್ದರಿಂದ ಶ್ರೀಗೋವಿಂದನಾದ ಪರಮಾತ್ಮನಿಗೆ ಎಂದಿಗೂ ಯಾರೂ, ಏನೂ ಸರಿಯೂ ಅಲ್ಲ, ಅವನಿಗಿಂತ ಮಿಗಿಲೂ ಅಲ್ಲ ಎಂದಿದ್ದಾರೆ.

ಡಿವಿಜಿಯವರು ಕಗ್ಗದಲ್ಲಿ :
ಸೃಷ್ಟಿಯದ್ಭುತಶಕ್ತಿಯೊಳ್ಳೊರ್ವನಿರಲು ನ - |
ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ||
ಇಷ್ಟವಾತನೊಳುದಿಸುವಂತೆ ಚೋದಿಪುದೆಂತು ? |
ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ||  - ಅದ್ಭುತವಾದ ಬ್ರಹ್ಮಾಂಡವನ್ನು ಸೃಷ್ಟಿಸಿ, ಅದರೊಳಗೇ ತನ್ನ ವ್ಯಾಪ್ತಿಯನ್ನು ಪಸರಿಸಿರುವ, ತಾನೇ ಅದಾಗಿ ನೆಲೆಸಿರುವ ಅವನಿಗೆ (ಭಗವಂತ) ನಾವು ಬೇಡುವುದನ್ನು ಕೊಡುವುದು ಅವನಿಗೆ ತಿಳಿದಿಲ್ಲವೇ ಅಥವಾ ಅದು ಅವನಿಗೆ ಅಸಾಧ್ಯವೇ ? ಇಂತಹ ಅತ್ಯಂತ ಸುಂದರವಾದ, ಅದ್ಭುತವಾದ ಶಕ್ತಿಗಳನ್ನೊಳಗೊಂಡ ಬ್ರಹ್ಮಾಂಡವನ್ನೇ ಸೃಷ್ಟಿಸಬಲ್ಲವನಾದ ಅವನು ನಿಸ್ಸಂಶಯವಾಗಿಯೂ ಸರ್ವಶಕ್ತ, ಸರ್ವನಿಯಾಮಕ, ಸರ್ವಶ್ರೇಷ್ಠ.  ನಮ್ಮೆಲ್ಲಾ ಇಷ್ಟಗಳನ್ನೂ ಪೂರೈಸಬಲ್ಲವನು, ಪೊರೆಯುವವನು ಅವನೇ, ಆದರೆ ಅವನನ್ನು ಒಲಿಸುವ ಪರಿ, ನಮಗೆ ತಿಳಿದಿಲ್ಲ ಎನ್ನುವುದೇ ನಮ್ಮ ಕಷ್ಟ ಎನ್ನುತ್ತಾರೆ.

ದೈವಕೃಪೆಯೆನುವುದೇಂ ? ಪರಸತ್ತ್ವನವವೃಷ್ಟಿ |
ಜೀವಗುಣ ಪಕ್ವಪಟ್ಟಂತದರ ವೇಗ ||
ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ |
ತೀವಿ ದೊರೆಕೊಲುವುದದು - ಮಂಕುತಿಮ್ಮ ||  -  ದೈವಕೃಪೆ ಎಂಬುದಕ್ಕೆ ಅರ್ಥ ಭಗವಂತನ ಅಪಾರವಾದ ಕರುಣೆ, ನಿರಂತರ ನಿತ್ಯನೂತನವಾಗಿ ಅವನು ನಮ್ಮ ಮೇಲೆ ಸುರಿಸುತ್ತಿರುವ ಅನುಗ್ರಹವರ್ಷ.  ನಾವು ಸದಾ ನಮ್ಮ ಲೌಕಿಕ ಬೇಕುಗಳನ್ನೇ ಕಾರಣವಾಗಿಟ್ಟುಕೊಂಡು ಭಗವಂತನನ್ನು ಬೇಡುತ್ತಾ ಅವನ ಅನುಗ್ರಹವನ್ನೂ, ಕರುಣೆಯನ್ನೂ ನಿರೀಕ್ಷಿಸುತ್ತೇವೆ.  ಆದರೆ ಭಗವಂತ ಕೇವಲ ನಮ್ಮ ಬೇಡಿಕೆಗಳನ್ನು ಪೂರೈಸುವುದಕ್ಕಾಗಿಯೇ ಇರುವನೇ ?  ಇಂತಹ ಸುಂದರ ಸೃಷ್ಟಿಯನ್ನು ಮಾಡಿದ ಭಗವಂತನ ಉದ್ದೇಶ ಅದಲ್ಲ, ಸೃಷ್ಟಿಕ್ರಿಯೆ ಅವನ ಆನಂದ.  ಆ ಆನಂದದಲ್ಲಿ ನಾವು ಪಾಲುಗೊಂಡರೆ ಅದು ನಮಗೆ ಭವ ಬಂಧನದ ಭಾರ ತಗ್ಗಿಸುತ್ತದೆ.  ಆದರೆ ಇದಕ್ಕೆ ಜೀವ ಪಕ್ವವಾಗಬೇಕು, ನಿರಂತರ ಪ್ರಯತ್ನಗಳಿಂದ ಸಂಸ್ಕಾರಗೊಳ್ಳಬೇಕು.  ಎಷ್ಟು ಆಳಕ್ಕಿಳಿದು ಪಕ್ವಗೊಳ್ಳುತ್ತೇವೆಯೋ, ಅಷ್ಟು ಭಗವಂತನ ಕೃಪೆ ಹೆಚ್ಚುತ್ತದೆ.  ಮನಸನ್ನು ಪರಿಶುದ್ಧಗೊಳಿಸುತ್ತದೆ, ಗುರಿಯತ್ತ ಪಯಣಿಸಲು ಪ್ರೇರೇಪಿಸುತ್ತದೆ, ಅನುಕೂಲಗಳನ್ನು ಒದಗಿಸಿಕೊಡುತ್ತದೆ.  ಅದೇ ಅಲೆ, ಭಕ್ತಿ, ನಮ್ಮ ಒಳ ಹೊರಗೂ ತುಂಬಿ ಉದ್ದೀಪನಗೊಳಿಸುತ್ತದೆ.  

ಒಂದೊಮ್ಮೆ ಈ ಆನಂದದತ್ತ ಮುಖ ಮಾಡಿದರೆ ಸಾಕು, ಶರಣಜನಮಂದಾರನಾದ ಭಗವಂತನು, ಆದರದಿಂದ ನಮ್ಮ ಕೈ ಹಿಡಿಯುತ್ತಾನೆ ಮತ್ತು ಅನುಗ್ರಹಿಸುತ್ತಾನೆ.







 ಚಿತ್ರಕೃಪೆ : ಅಂತರ್ಜಾಲ

1 comment:

Badarinath Palavalli said...

10ನೇ ಸಂಧಿಯನ್ನು ವಿವರಿಸುತ್ತಾ ತಾವು, 'ನಿರುಪಮಾನಂದಾತ್ಮ' ನಾಮವನ್ನು ತುಂಬಾ ವಿವರವಾಗಿ ಅರ್ಥೈಸಿದ್ದೀರಾ ಸಾರ್. ನಮಗೂ ಆ ಪಾರ್ಥಸಾಖನ ಒಲುಮೆ ಸಿಗಲಿ.

ಶ್ರೀ. ಜಗನ್ನಾಥ ದಾಸರ ತತ್ವಸುವ್ವಾಲಿಯ ಬಗ್ಗೆ ಕೆಲವು ಕಡೆ ಓದಿದ್ದೆ, ಈಗ ಅವರ ಕೃತಿಗಳನ್ನು ಅಧ್ಯಯನ ಮಾಡಲೇ ಬೇಕೆಂಬ ಹುರುಪು ಬಂದಿತು.

ಗುಂಡಪ್ಪನವರ ಕಗ್ಗಕ್ಕಾಗಿಯೂ ಧನ್ಯವಾದಗಳು.